ಪೆರ್ಲ : ರಾಷ್ಟ್ರೀಯ ಸೇವಾ ಯೋಜನೆಯ ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಘಟಕದ ಕಾರ್ಯಕರ್ತರು ಎಣ್ಮಕಜೆ ಗ್ರಾಮ ಪಂಚಾಯತಿನ ಬೆದ್ರಂಪಳ್ಳ ವಾರ್ಡಿನ ಚಂಬ್ರಕಾನದಲ್ಲಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.
ಈ ಪ್ರದೇಶದ ಜನರು ಗಾಳಿ ಮಳೆ, ಬಿಸಿಲಿಗೆ ರಕ್ಷಣೆಯಿಲ್ಲದೆ ಬಸ್ ಕಾಯುತ್ತಿರುವುದನ್ನು ಮನಗಂಡ ಎನ್ನೆಸ್ಸೆಸ್ ಕಾರ್ಯಕರ್ತರು ಗುಜುರಿ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾರುವ ಯೋಜನೆ ಮೂಲಕ ವಿವಿಧ ಧಾನಿಗಳ ನೆರವಿನಿಂದ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಿದ್ದು, ಕಳೆದ ಒಂದು ತಿಂಗಳ ಅಂತರದಲ್ಲಿ ಕಾಮಗಾರಿ ಪೂರ್ತಿಗೊಳಿಸಿದ್ದಾರೆ.
ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ. ಸದಸ್ಯರಾದ ರಾಧಾಕೃಷ್ಣ ನಾಯಕ್ ಜೆ.ಎಸ್, ರಾಮಚಂದ್ರ ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ, ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಯುಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ಎನ್ನೆಸ್ಸೆಸ್ ನಾಯಕಿ ನಫೀಸಾ ಸುಲೈಮ ಮುಂತಾದವರು ಮಾತನಾಡಿದರು.
ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶಾಸ್ತ ಕುಮಾರ್ ಎ ಸ್ವಾಗತಿಸಿ, ಎನ್ನೆಸ್ಸಸ್ ಕಾರ್ಯ ನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಕ್ರಾಸ್ತಾ ವಂದಿಸಿದರು.