ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ದ.ಕ ಜಿಲ್ಲೆ), ಮೇರಾ ಯುವ ಭಾರತ್ – ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷ ಸೇವಾ ಟ್ರಸ್ಟ್ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ ಶ್ರೀಕಾಂತ್ ಬಿರಾವು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಇಂದಿನ ಸಮಾಜದಲ್ಲಿ ಮಾದಕ ವಸ್ತುಗಳ ವ್ಯಸನವು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದ್ದು, ವಿಶೇಷವಾಗಿ ಯುವ ಸಮುದಾಯದ ಭವಿಷ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ.ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ ಒಳಗಾಗದೆ ತಮ್ಮ ಶಿಕ್ಷಣದತ್ತ ಗಮನ ಹರಿಸುವುದು ಅಗತ್ಯವಾಗಿದ್ದು, ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಇದು ಸಹಕಾರಿ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮೊನಪ್ಪ ಪೂಜಾರಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.





















