Gl
ಶಿಕ್ಷಣ

ದೇಶಕ್ಕಾಗಿ ಬಲಿದಾನ ಸಮರ್ಪಿಸಿದ ಪುಟಾಣಿಗಳನ್ನು ನೆನಯಬೇಕು : ಆದರ್ಶ ಗೋಖಲೆ | ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ವೀರ್ ಬಾಲ್ ದಿವಸ್ ಕಾರ್ಯಕ್ರಮ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಜೀವನವನ್ನೇ ಧಾರೆ ಎರೆದ ಪುಟಾಣಿಗಳನ್ನು ಸ್ಮರಿಸುವ ದಿನವೇ ಡಿಸೆಂಬರ್ 26ರ ಹಿನ್ನೆಲೆಯಾಗಿದೆ. ವೀರ ಬಾಲ್ ದಿವಸದ ಆಚರಣೆಯ ಹಿಂದೆ ತ್ಯಾಗ, ಬಲಿದಾನ ಹಾಗೂ ಗುರುಗೋಬಿಂದ ಸಿಂಗ್ ಅವರ ಇಬ್ಬರು ಮಕ್ಕಳ ಯಶೋಗಾಥೆ ಇದೆ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

core technologies

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ.ಯಲ್ಲಿ ಆಯೋಜಿಸಲಾದ ವೀರ್ ಬಾಲ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ನಮ್ಮ ಕುಟುಂಬ ದೇಶಕ್ಕೋಸ್ಕರ ಏನು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಆದರೆ ಒಂದು ಕುಟುಂಬ, ಸಮಾಜ ಅಪೇಕ್ಷೆ ಪಟ್ಟಾಗ ರಕ್ತವನ್ನು ಸಮರ್ಪಿಸಿದೆ. ಆ ಕುಟುಂಬವೇ ಗುರು ಗೋಬಿಂದ್ ಸಿಂಗ್ ಅವರ ಕುಟುಂಬ. ಸಮಾಜಕ್ಕಾಗಿ, ದೇಶಕ್ಕಾಗಿ ಕೇವಲ ಒಬ್ಬನ ಬಲಿದಾನವಲ್ಲ, ಬದಲಿಗೆ ಇಡೀ ಕುಟುಂಬವೇ ಬಲಿದಾನ ಸಮರ್ಪಿಸಿದ ದಿನ ಡಿಸೆಂಬರ್ 26. ದೇಶಕ್ಕೆ ಮಾದರಿಯಾಗಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಐದು ತಲೆಮಾರನ್ನೊಳಗೊಂಡ ಕುಟುಂಬ ಯಾವುದಾದರೂ ಇದ್ದರೆ ಅದು ಕೇವಲ ಗುರುಗೋಬಿಂದ ಸಿಂಗ್ ಅವರ ಕುಟುಂಬ ಎಂದರು.

ಔರಂಗಜೇಬನ ಮತಾಂತರವನ್ನು ವಿರೋಧಿಸಿದ್ದಕ್ಕಾಗಿ ಆತ ವಿಧಿಸಿದ ಕಠಿಣ ಶಿಕ್ಷೆಯಾದ ಜೀವಂತ ಸಮಾಧಿಗೆ ವೀರ ಬಾಲಕರಾದ 9 ವರ್ಷದ ಬಾಲಕ ಜೋರಾವರ್ ಸಿಂಗ್ ಮತ್ತು 5 ವರ್ಷದ ಬಾಲಕ ಫತೇಹ್ ಸಿಂಗ್ ತಮ್ಮನ್ನು ತಾವು ಒಡ್ಡಿಕೊಂಡು ಧರ್ಮಕ್ಕಾಗಿ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಆದರೆ ನಮ್ಮ ಇತಿಹಾಸ ಇಂತಹ ಕ್ರಾಂತಿಕಾರಕ ಇತಿಹಾಸವನ್ನು ಮರೆಮಾಚಲು ಪ್ರಯತ್ನಪಡುತ್ತಲೇ ಬಂದಿದೆ. ಆದರೆ ಈಗ ಒಂದೊಂದಾಗಿ ಸತ್ಯ ಹೊರಬರಲಾರಂಭಿಸಿದೆ ಎಂದು ನುಡಿದರು.

ಪುತ್ತೂರಿನ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಿ. ವಸಂತ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೇಶದ ಕುರಿತಾದ ಚಿಂತನೆಗಳನ್ನು ಬೆಳಸಿಕೊಳ್ಳಬೇಕು. ಜತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಕಾರಣರಾದ ಗುರು – ಹಿರಿಯರನ್ನು, ತಂದೆ ತಾಯಿಯರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಪ್ರತಿಯೊಬ್ಬರಿಗೂ ಗೌರವವನ್ನು ಕೊಟ್ಟು ವಿದ್ಯಾಭ್ಯಾಸವನ್ನು ಮುಂದುವರಿಸಬೇಕು. ವಿದ್ಯಾಭ್ಯಾಸ ಎಂದರೆ ಕೇವಲ ಓದು, ಬರೆವಣಿಗೆ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಕೂಡ ಶಿಕ್ಷಣದ ಭಾಗವೇ ಆಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯ ನಟ್ಟೋಜ  ಮಾತನಾಡಿ, ದೇಶಕ್ಕಾಗಿ ಮತ್ತು ಧರ್ಮಕ್ಕಾಗಿ ನಾವು ಸದಾ ಸನ್ನದ್ಧರಾಗಬೇಕು. ದೇಶದ ಕೀರ್ತಿಯನ್ನು ಎತ್ತಿ ಹಿಡಿಯುವಂತವರಾಗಬೇಕು ಎಂದರು.

ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್  ಉಪಸ್ಥಿತರಿದ್ದರು.

ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಂತೆಯೇ ವಿದ್ಯಾಭಾರತಿ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತದನಂತರ  ವೀರ ಬಾಲ್ ದಿವಸದ ಪ್ರಯುಕ್ತ ವೀರ ಬಾಲಕರಾದ ಜೋರಾವರ ಸಿಂಗ್ ಹಾಗೂ ಫತೇಸಿಂಗ್ ಬಗೆಗಿನ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಪುರಾಣದ ವೀರ ಬಾಲಕರ ಸ್ವಗತವನ್ನು ಪ್ರದರ್ಶಿಸಲಾಯಿತು. ವೀರ ಬಾಲಕ ಪ್ರಶಸ್ತಿ ಪಡೆದ ವೀರರ ಕುರಿತಾಗಿ ಮಾನ್ವಿ, ಕುವಿರಾ ವಿವರ ನೀಡಿದರು.

8ನೇ ತರಗತಿಯ ಸನ್ಮಯ್ ಎನ್. ಪ್ರಾರ್ಥಿಸಿದರು. ನಾಲ್ಕನೇ ತರಗತಿಯ ವಿಧಿತಾ ಸ್ವಾಗತಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts