ಹೊಸದಿಲ್ಲಿ: ಪ್ರಧಾನಿ ಮೋದಿಯ “ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ಒಂದು ತಿಂಗಳಲ್ಲಿ 3.5 ಕೋಟಿಗೂ ಹೆಚ್ಚು ಜನರಿಂದ ನೋಂದಣಿ ಪಡೆದು ಗಿನ್ನೆಸ್ ದಾಖಲೆ ನಿರ್ಮಿಸಿದೆ.
2025ರ ಫೆಬ್ರವರಿಯ ಕಾರ್ಯಕ್ರಮದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಈ ಮೂಲಕ ಸಾರ್ವಜನಿಕರನ್ನು ಒಳಗೊಂಡ ಕಾರ್ಯಕ್ರಮಕ್ಕೆ ಒಂದು ತಿಂಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ನೋಂದಣಿ ಎಂಬ ವಿಶ್ವ ದಾಖಲೆ ನಿರ್ಮಾಣವಾಗಿದೆ. ಗಿನ್ನೆಸ್ ವಿಶ್ವದಾಖಲೆಯ ಪ್ರಮಾಣಪತ್ರವನ್ನು ಔಪಚಾರಿಕವಾಗಿ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಎಲ್ಲ ಮಾಧ್ಯಮ ವೇದಿಕೆಗಳಲ್ಲಿ ಒಟ್ಟು 21 ಕೋಟಿಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಕಾರ್ಯಕ್ರಮದ 8ನೇ ಆವೃತ್ತಿ ದಾಖಲಿಸಿದೆ ಎಂದು ಮಾಹಿತಿ ನೀಡಿದರು.
ಈ ಉಪಕ್ರಮದ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ನೇರವಾಗಿ ಸಂವಾದ ನಡೆಸುತ್ತಾರೆ. ಪರೀಕ್ಷೆಯ ಋತುವನ್ನು ಮಕ್ಕಳ ಒತ್ತಡದ ಸಮಯದ ಬದಲಾಗಿ ಪ್ರೋತ್ಸಾಹದ ಸಮಯವನ್ನಾಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಕಾರ್ಯಕ್ರಮದ ಸಂದರ್ಭದಲ್ಲಿ, ಪರೀಕ್ಷಾ ಒತ್ತಡ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮೋದಿ ಉತ್ತರಿಸುತ್ತಾರೆ.