ಸುಳ್ಯ: ಜೆಸಿಐ ಬೆಳ್ಳಾರೆ ಹಾಗೂ ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಎಂಬಿಎ ವಿದ್ಯಾರ್ಥಿಗಳಿಗಾಗಿ ವ್ಯವಹಾರ ತರಬೇತಿ ಪ್ರೇರಣೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಸಿಇಓ ಡಾ. ಉಜ್ವಲ್ ಯು.ಜೆ. ಮಾತನಾಡಿ, ನಾವು ಹೊಸ ಯುಗಕ್ಕೆ ಕಾಲಿಟ್ಟಿದ್ದೇವೆ. ಅದು ಎಐ. ಹಾಗಾಗಿ ವ್ಯವಹಾರದಲ್ಲಿ ಎಐನ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಬೇಕು ಎಂದರು.
ವ್ಯವಹಾರದಲ್ಲಿ ನಾವು ಪ್ರಮುಖವಾಗಿ ಗ್ರಾಹಕರನ್ನು ಒಪ್ಪುವಂತೆ ಮಾಡಬೇಕು. ಮಾತ್ರವಲ್ಲ, ಸರಿಯಾದ ಸ್ಥಳದಲ್ಲಿ ಸಮರ್ಪಕ ಉಪಕರಣ ಬಳಕೆ ಮಾಡುವ ನೈಪುಣ್ಯತೆಯನ್ನು ಕರಗತ ಮಾಡಿಕೊಳ್ಳಬೇಕು. ಹಾಗೆಂದು ವ್ಯವಹಾರದ ನೀತಿಯನ್ನು ಬಿಟ್ಟು ವ್ಯವಹಾರ ಬೇಡ ಎಂದ ಅವರು, ಸಂಪೂರ್ಣ ಜ್ಞಾನ, ಮಾಹಿತಿಯನ್ನು ನೀಡುವ ಕಾರ್ಯಕ್ರಮ ಇದು. ನಿಮ್ಮ ಜೀವನಕ್ಕೆ ದಾರಿದೀಪವಾಗಲಿದೆ ಎಂದರು.
ಜೆಸಿಐ ವಲಯ ತರಬೇತುದಾರ ಪಶುಪತಿ ಶರ್ಮ ಮಾತನಾಡಿ, ಬದಲಾವಣೆಯೊಂದಿಗೆ ನಾವು ಬದಲಾಗಬೇಕು. ಬದಲಾಗದೇ ಇದ್ದರೆ ಬದಲಾವಣೆ ನಮ್ಮನ್ನು ಬದಲು ಮಾಡುತ್ತದೆ. ಆದ್ದರಿಂದ ಬದಲಾವಣೆಗೆ ನಾವು ಒಗ್ಗಿಕೊಳ್ಳಬೇಕು ಎಂದರು.
ಬೆಳ್ಳಾರೆ ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಡಾ. ಸುರೇಶ ವಿ., ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಾನಂದ ಎ., ಜೇಸಿಐ ಬ್ಯುಸಿನೆಸ್ ಆಪರ್ಚುನಿಟೀಸ್ ವಿಭಾಗದ ವಲಯ ಸಂಯೋಜಕ ಜಗದೀಶ್ ರೈ ಶುಭಹಾರೈಸಿದರು.
ಪೂರ್ಣಿಮಾ ಪೆರ್ಲಂಪಾಡಿ ಜೇಸಿ ವಾಣಿ ವಾಚಿಸಿದರು.
ಬಳಿಕ ಪಶುಪತಿ ಶರ್ಮ ಅವರು ಕಾರ್ಯಾಗಾರ ನಡೆಸಿಕೊಟ್ಟರು.