ಪುತ್ತೂರು: ಪರ್ಲಡ್ಕ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಅರ್ಪಿಸುವ ಮೂರು ದಿನಗಳ ಸಾಂಸ್ಕೃತಿಕ ಕಲಾ ಸಂಭ್ರಮ ಕಲೋಪಾಸನಾಕ್ಕೆ ಪರ್ಲಡ್ಕ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ನಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು.

ಪಾಣಾಜೆ ಸುಬೋಧ ಶಾಲಾ ನಿವೃತ್ತ ಮುಖ್ಯಶಿಕ್ಷಕ ಪಿ.ಕೃಷ್ಣ ಭಟ್ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಸಂಗೀತ ಎಂಬುದು ಮನಸ್ಸಿಗೆ ಪುನಶ್ಚೇತನ ನೀಡುವ ಔಷಧಿ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಆಯಸ್ಸಿಗೆ ಜೀವ ಕೊಡುವ ಕಾರ್ಯಕ್ರಮ ಆಗಿ ಮೂಡಿ ಬಂದಿದೆ. ದೈವಾನುಗ್ರಹದ ಜತೆ ಪರಿಶ್ರಮ ಇದ್ದರೆ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಂತಹಾ ಕಾರ್ಯಕ್ರಮಗಳನ್ನು ಏರ್ಪಡಿಸುವ ಡಾ.ಹರಿಕೃಷ್ಣ ಪಾಣಾಜೆಯವರು ಇದಕ್ಕೆ ಉದಾಹರಣೆ. ಬದುಕು ಎಲ್ಲರಿಗೂ ಬೇಕು. ಎಲ್ಲರೂ ಬದುಕುತ್ತಾರೆ. ಬದುಕನ್ನು ನಂಬಿದವರು ಹರಿಕೃಷ್ಣ ಪಾಣಾಜೆಯವರು ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ನಿರ್ದೇಶಕಿ ರೂಪಲೇಖಾ, ಡಾ.ಕೇದಾರಕೃಷ್ಣ, ಮೇಘನಾ ಪಾಣಾಜೆ, ಮನೇಕ್ ಕಿಶೋರ್, ಗೋಪಾಲ ಪಣಿಕ್ಕರ್, ಗೌರಿ ಪಣಿಕ್ಕರ್ ಉಪಸ್ಥಿತರಿದ್ದರು.
ಉದ್ಘಾಟಕರಾದ ನಿವೃತ್ತ ಶಿಕ್ಷಕ ಪಿ.ಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಎಚ್.ಮಾಧವ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಂಜನಿ ಗಾಯತ್ರಿ ಅವರ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಗೆ ಎಲ್.ರಾಮಕೃಷ್ಣನ್ (ವಯಲಿನ್), ದಿಲ್ಲಿ ಸಾಯಿರಾಮ್ (ಮೃದಂಗ), ವಝಪಿಲ್ಲಿ ಕೃಷ್ಣ ಕುಮಾರ್ (ಘಟಂ)ನಲ್ಲಿ ಸಾಥ್ ನೀಡಿದರು.