ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣದ ಕುಖ್ಯಾತ ಸರಕಳ್ಳರಿಬ್ಬರನ್ನು ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಚಿನ್ನದ ಸರ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಜೈಲಿನಿಂದ ಹೊರಬಂದ ದಿನವೇ ಮತ್ತೆ ಕಳವು ಕೃತ್ಯ ಎಸಗಿ ಜೈಲು ಪಾಲಾಗಿದ್ದಾರೆ. ಚೆಂಬುಗುಡ್ಡೆ, ಪೆರ್ಮನೂರು ನಿವಾಸಿ ಹಬೀಬ್ ಹಸನ್, ಚೊಂಬುಗುಡ್ಡೆ ಹಬೀಬ್ ಅಬ್ಬಿ (43) ಮತ್ತು ಬಂಟ್ವಾಳ ಬಿ.ಮೂಡ ಗ್ರಾಮದ ಉಮ್ಮರ್ ಶಿಯಾಫ್, (29) ಬಂಧಿತರು. ಹಬೀಬ್ ಹಸನ್ ಅಬ್ಬಿ ಎಂಬಾತನ ವಶದಿಂದ ಕಾರ್ಕಳದಿಂದ ಸುಲಿಗೆ ಮಾಡಿದ 17.43 ಗ್ರಾಂ ಚಿನ್ನದ ಸರ, ಕಳ್ಳತನ ಮಾಡಲು ಉಪಯೋಗಿಸಿದ ಹೀರೋ ಹೊಂಡಾ ಬೈಕ್, ಚೂರಿಯನ್ನು ವಶಪಡಿಸಲಾಗಿದೆ.
ಆರೋಪಿಗಳಿಬ್ಬರು 2 ತಿಂಗಳ ಹಿಂದೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿ ಸೆರೆಯಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಡಿ.6ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಅದೇ ದಿನವೇ ಮಂಗಳೂರು ನಗರದ ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ ಮರುದಿನ ಆರೋಪಿಗಳಿಬ್ಬರು ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಅಲ್ಲದೇ 2 ದಿನ ಬಿಟ್ಟು ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಇನ್ನೊಂದು ಬೈಕ್‌ನ್ನು ಕಳವು ಮಾಡಿ ಅದೇ ಬೈಕ್‌ನಲ್ಲಿ ಆರೋಪಿ ಹಬೀಬ್ ಆತನ ಸ್ನೇಹಿತೆ ಮಹಿಳೆಯ ಜೊತೆಗೂಡಿ ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಸುಲಿಗೆ ಮಾಡಿದ್ದರು.
ಆರೋಪಿಗಳ ಪೈಕಿ ಹಬೀಬ್ ಹಸನ್ ಅಬ್ಬಿ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡುಬಿದಿರೆ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜಪೆ, ವಿಟ್ಲ ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿದೆ.
ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಸಿಸಿ ಟಿವಿ ಫೂಟೇಜ್ ಸಂಗ್ರಹಿಸಿ ಮಾಹಿತಿ ಕಲೆಹಾಕಿದರು. ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 4 ದಿನಗಳ ಹಿಂದೆ ಜೈಲ್‌ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಹಬೀಬ್ ಹಸನ್ ಹಾಗೂ ಆತನ ಸಹಚರ ಭಾಗಿಯಾಗಿರುವ ಕುರಿತು ಖಚಿತಗೊಂಡಿತ್ತು. ಇದೇ ವೇಳೆ ಆರೋಪಿ ಮಂಗಳೂರು ನಗರದ ಕಾರ್‌ಸ್ಟ್ರೀಟ್ ಬಳಿ ಇರುವ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್, ಪಿಎಸ್‌ಐ ಸುದೀಪ್, ಎಎಸ್‌ಐ ಮೋಹನ್, ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.