ಕರಾವಳಿ

ಮುಂಗಾರು ಪೂರ್ವ ಸಿದ್ಧತೆ: ರಾಜಕಾಲುವೆ, ಚರಂಡಿಗಳ ಹೂಳೆತ್ತಲು ದ.ಕ.ಜಿಲ್ಲಾಧಿಕಾರಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮುಂಬರುವ ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಕೃತಕ ನೆರೆ ಪರಿಸ್ಥಿತಿಯನ್ನು ತಡೆಗಟ್ಟುವ ಉದ್ದೇಶದಿಂದ ನಗರದ ರಾಜಕಾಲುವೆ ಹಾಗೂ ಬೃಹತ್ ಚರಂಡಿಗಳ ಹೂಳೆತ್ತುವ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚನೆ ನೀಡಿದ್ದಾರೆ.ಮಹಾನಗರಪಾಲಿಕೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಗುರುವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂಗಾರು ಮಳೆಯಲ್ಲಿ ಉಂಟಾಗಬಹುದಾದ ಜಲಾವೃತ ಸಮಸ್ಯೆಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.ಮಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಕೃತಕ ನೆರೆ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಅವರು, ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆ ಹಾಗೂ ಪ್ರಮುಖ ಚರಂಡಿಗಳ ಹೂಳೆತ್ತುವ ಕಾಮಗಾರಿಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ತ್ವರಿತವಾಗಿ ಕೈಗೊಳ್ಳಲು ಸೂಚಿಸಿದರು.

ಮಂಗಳೂರು ಮಹಾನಗರಪಾಲಿಕೆಯ ಮಳೆಗಾಲದ ಪೂರ್ವ ಸಿದ್ಧತಾ ಕಾರ್ಯಗಳ ಭಾಗವಾಗಿ, ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸುಮಾರು 50 ಕಿಲೋಮೀಟರ್‌ ಉದ್ದದ ಬೃಹತ್ ರಾಜಕಾಲುವೆ ಹಾಗೂ ಅದಕ್ಕೆ ಸಂಪರ್ಕ ಹೊಂದಿರುವ ಮುಖ್ಯ ಚರಂಡಿಗಳ ಹೂಳೆತ್ತುವ ಕಾಮಗಾರಿಯನ್ನು ಮಾರ್ಚ್ ತಿಂಗಳಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ.
ಕಾಮಗಾರಿಯನ್ನು ಸಮರ್ಪಕವಾಗಿ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಲಹೆಗಳನ್ನು ನೀಡಬಹುದಾಗಿದೆ. ಹೂಳೆತ್ತುವ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಪಾಲಿಕೆ ಸ್ವಾಗತಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306 / 2220319 ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9449007722 ಸಂಪರ್ಕಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಮಂಗಳೂರಿನಲ್ಲಿ ರಾಜ್ಯದ ಮೊದಲ ಬೋಟ್ ಆಂಬ್ಯುಲೆನ್ಸ್ | ಸರ್ಕಾರದ ನೆರವಿಗೆ ಕಾಯದೇ, ಮೀನುಗಾರರೇ ರೂಪಿಸಿದ ಯೋಜನೆ!

ಮಂಗಳೂರು: ಸಮುದ್ರದಲ್ಲಿನ ತುರ್ತು ಅವಘಡಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು…