ಪುತ್ತೂರು: ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಹಿರಿಯ ನಾಗರಿಕ ದಂಪತಿಯ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಗುರುವಾರ ಸಂಜೆ ಭೇಟಿ ನೀಡಿದರು.
ಹಿರಿಯ ನಾಗರಿಕ ದಂಪತಿಗಳ ಮನವೊಲಿಸಲು ಯತ್ನಿಸಿದ ಸಹಾಯಕ ಆಯುಕ್ತರು, ನೀವು ನೀಡಿದ ಮನವಿಯ ಪರಿಶೀಲನೆ ನಡೆಸುತ್ತಿದ್ದೇವೆ. ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಇದೀಗ 11 ದಿನಗಳಷ್ಟೇ ಆಗಿದೆ. ತನಿಖೆ ಪ್ರಗತಿಯಲ್ಲಿರುವಾಗ ಹೀಗೆ ಪ್ರತಿಭಟನೆ ಕುಳಿತುಕೊಳ್ಳುವುದು ಸರಿಯಲ್ಲ. ಅದಲ್ಲದೇ ನೀವಿಬ್ಬರು ಹಿರಿಯ ನಾಗರಿಕರಿದ್ದೀರಿ. ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕಲ್ಲವೇ ಎಂದರು.
ಇದಕ್ಕೆ ಉತ್ತರಿಸಿದ ಹಿರಿಯ ದಂಪತಿ, ಕಳೆದೊಂದು ವರ್ಷದಿಂದ ಮನವಿ ನೀಡುತ್ತಾ ಬಂದಿದ್ದೇವೆ. 2024ರ ನವಂಬರ್’ನಲ್ಲಿ ಕಡಬ ತಹಸೀಲ್ದಾರ್ ಅವರು ನಾವು ವಾಸವಿದ್ದ ಮನೆಯನ್ನು ಕೆಡವಿ ಹಾಕಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ಗಮನ ಸೆಳೆದಿದ್ದೇವೆ. ಹಾಗಿದ್ದು ಯಾವುದೇ ಸ್ಪಂದನೆ ದೊರಕಿಲ್ಲ. ನಾವು ಪ್ರತಿಭಟನೆ ಕುಳಿತುಕೊಳ್ಳುವುದು ಅನಿವಾರ್ಯ. ನೀವು ಹೇಳಿದ ಹದಿನೈದು ದಿನಗಳಿಗೆ ಇನ್ನು ನಾಲ್ಕು ದಿನವಿದೆ. ಆ ನಾಲ್ಕು ದಿನದಲ್ಲಿ ಏನೆಂದು ತೀರ್ಮಾನ ಕೊಡಿ. ನಂತರ ಅದನ್ನು ತೆಗೆದುಕೊಂಡು ಹೋಗುತ್ತೇವೆ. ಅಲ್ಲಿಯೂ ನಮಗೆ ನ್ಯಾಯ ಸಿಗಲಿಲ್ಲ ಎಂದಾದರೆ ದಯಾಮರಣಕ್ಕೆ ಅವಕಾಶ ಮಾಡಿಕೊಡಿ ಎಂದರು.
ಪ್ರತಿಕ್ರಿಯಿಸಿದ ಸ್ಟೆಲ್ಲಾ ವರ್ಗೀಸ್, ತನಿಖೆ ನಡೆಯುತ್ತಿರುವಾಗ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮಗೆ ಮನೆ ಇಲ್ಲಾ ಎಂದಾದರೆ, ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲು ವ್ಯವಸ್ಥೆ ಮಾಡುತ್ತೇನೆ ಎಂದರು.
ಹಿರಿಯ ದಂಪತಿ ಮಗ ಸುಬ್ರಹ್ಮಣ್ಯ ಮಾತನಾಡಿ, ಇರುವ ಮನೆಯನ್ನು ಅಧಿಕಾರಿಗಳು ಒಡೆದು ಹಾಕಿದ್ದಾರೆ ಎನ್ನುವುದು ನಮ್ಮ ದೂರು. ಈಗ ನಿರಾಶ್ರಿತರ ಶಿಬಿರಕ್ಕೆ ಕಳುಹಿಸುತ್ತೇವೆ ಎನ್ನುವುದು ಎಷ್ಟು ಸರಿ? 2005ರಿಂದಲೇ ಈ ಜಾಗದಲ್ಲಿ ಮನೆ ವಾಸ್ತವ್ಯ ಹೊಂದಿದ್ದೆವು. ಕೃಷಿಯನ್ನು ಮಾಡಿದ್ದೇವೆ ಎಂದರು.
ಸಹಾಯಕ ಆಯುಕ್ತರು, ಅದು ಸರಕಾರಿ ಜಾಗ. 94ಸಿಗೆ ಅರ್ಜಿ ನೀಡಿದ್ದೀರಾ? ಏನಾಗಿದೆ ಎಂದು ಪ್ರಶ್ನಿಸಿದರು.
ಉತ್ತರಿಸಿದ ಮುತ್ತುಸ್ವಾಮಿ, ಮನೆ ಕಟ್ಟಿದ್ದರೂ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದಾರೆ. ಪಕ್ಕದಲ್ಲೇ ಟೆಂಟ್ ಕಟ್ಟಿದ್ದರೂ ಅವರ ಅರ್ಜಿಯನ್ನು ಪುರಸ್ಕರಿಸಿದ್ದಾರೆ. ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಆಗ್ರಹಿಸಿದರು.
ಸ್ಟೆಲ್ಲಾ ವರ್ಗೀಸ್ ಅವರು, ನಿಮ್ಮ ಅರ್ಜಿಯನ್ನು ಪುರಸ್ಕರಿಸಿ ಸುಳ್ಯ ತಹಸೀಲ್ದಾರ್ ಅವರಿಂದ ವರದಿ ತರಿಸುತ್ತಿದ್ದೇನೆ. ಅಲ್ಲಿವರೆಗೆ ನೀವು ಕಾಯಬೇಕು. ಇಲ್ಲಿ ಬಂದು ಕುಳಿತುಕೊಳ್ಳುವುದರಿಂದ ಎಲ್ಲರಿಗೂ ಸಮಸ್ಯೆ. ಆದ್ದರಿಂದ ಇಲ್ಲಿಂದ ತೆರಳಬೇಕು ಎಂದರು.
ಉತ್ತರಿಸಿದ ಹಿರಿಯ ದಂಪತಿ (ಮುತ್ತುಸ್ವಾಮಿ – ರಾಧಮ್ಮ), ಇರುವ ಮನೆ ಕೆಡವಿದ್ದೀರಿ. ಅಲ್ಲಿಯೂ ಇಷ್ಟೇ ಇರುವುದು. ಇಲ್ಲಿ ಮರದಡಿಯಲ್ಲಿ ಕುಳಿತಂತೆ, ಅಲ್ಲಿಯೂ ಕುಳಿತುಕೊಳ್ಳಬೇಕು. ಅದಲ್ಲದೇ, ಆನೆ ಕಾಟ ಬೇರೆ. ಹಾಗಾಗಿ ನ್ಯಾಯ ಸಿಗುವವರೆಗೆ ಇಲ್ಲಿಯೇ ಇರುತ್ತೇವೆ ಎಂದರು.
ವರದಿ ಬಂದ ಕೂಡಲೇ ಮುಂದಿನ ಕ್ರಮ
ಕಡಬ ತಹಸೀಲ್ದಾರ್ ಅವರು ಮನೆ ಕೆಡವಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಸುಳ್ಯ ತಹಸೀಲ್ದಾರ್ ಅವರು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಸ್ಟೆಲ್ಲಾ ವರ್ಗೀಸ್, ಸಹಾಯಕ ಆಯುಕ್ತೆ, ಪುತ್ತೂರು



























