ಪುತ್ತೂರು: ಯುವ ಜನರು ಮಾದಕ ದ್ರವ್ಯ ವ್ಯಸನ, ಸಾಮಾಜಿಕ ಜಾಲತಾಣ ಮತ್ತು ಮಾನಸಿಕ ಖಿನ್ನತೆ ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಹಲವಾರು ಸಮಸ್ಯೆಗಳು ಬಂದರೂ ಯುವಜನರು ತಾಳ್ಮೆ ಕಳೆದುಕೊಳ್ಳದೆ, ಸಮಸ್ಯೆಗಳು ಎದುರಾದಾಗ ಧೈರ್ಯದಿಂದ ಎದುರಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರರಾದ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಇದರ ವತಿಯಿಂದ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯ ಬನ್ನೂರು ಇಲ್ಲಿ ಮಾದಕ ದ್ರವ್ಯ ವ್ಯಸನ, ಸಾಮಾಜಿಕ ಜಾಲತಾಣ, ಆರೋಗ್ಯ ಮತ್ತು ಜೀವನಶೈಲಿ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವ್ಯಸನದಿಂದ ಬಹಳಷ್ಟು ಯುವಜನರು ಜೀವನ ನಾಶಮಾಡಿಕೊಳ್ಳುತ್ತಿದ್ದು ಇದರಿಂದ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಮಾದಕ ವ್ಯಸನದ ಅರಿವು ಮೂಡಿಸುವ ಜವಾಬ್ದಾರಿ ಎಲ್ಲಾ ಯುವಜನರ ಮೇಲಿದ್ದು ನಶಾ ಮುಕ್ತ ಭಾರತದೊಂದಿಗೆ ಭಾಗವಹಿಸಿ ಯಾವುದೇ ಬೆದರಿಕೆ, ಮಾನಸಿಕ ಖಿನ್ನತೆಗೆ ಒಳಗಾಗಿ ನಕಾರಾತ್ಮಕ ಅಲೋಚನೆ ಮಾಡದಿರಿ ಎಂದು ಹೇಳಿದರು.
ವಸತಿ ನಿಲಯದ ನಿಲಯ ಮೇಲ್ವಿಚಾರಕಿ ದೀಪಾ ಮಾತನಾಡಿ, ಸಾಮಾಜಿಕ ಜಾಲತಾಣದ ಬಳಕೆ ಒಳ್ಳೆಯ ಉದ್ದೇಶಕ್ಕಾಗಿ ಬಳಸಿ ಇದರಿಂದ ಅನಾಹುತ ತಂದಕೊಳ್ಳಬೇಡಿ. ಯುವಜನರು ಉದ್ಯೋಗ ಪಡೆಯುವುದರ ಬಗ್ಗೆ ಹೆಚ್ಚು ಗಮನಹರಿಸಿ ಎಂದು ಹೇಳಿದರು.


























