Gl
ಕರಾವಳಿ

ಮನೆ ನಿರ್ಮಾಣಕ್ಕೆ 6 ಇಲಾಖೆಗಳಿಗೆ ಅಲೆದಾಟ: ಸದನದ ಗಮನ ಸೆಳೆದ ಕಿಶೋರ್ ಕುಮಾರ್ ಪುತ್ತೂರು | ಅಧಿನಿಯಮಕ್ಕೆ ತಿದ್ದುಪಡಿ ತಂದು ಗ್ರಾಮಾಂತರ ಯೋಜನಾ ನಿಯಮ ಜಾರಿಗೆ ಆಗ್ರಹ

GL

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಕರಾವಳಿ ಪ್ರದೇಶದ ಸಾರ್ವಜನಿಕರು ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು.

core technologies

ಶಾಸಕರು ಮಾತನಾಡುತ್ತಾ, ರಾಜ್ಯದ ಕರಾವಳಿ ಗ್ರಾಮೀಣ ಭಾಗದ ಒಬ್ಬ ಸಾಮಾನ್ಯ ನಾಗರಿಕನು ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ, ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಅತ್ಯಂತ ಜಟಿಲವಾಗಿದ್ದು, ಒಬ್ಬ ವ್ಯಕ್ತಿಗೆ ಸ್ವತಃ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಿದೆ ಎಂದು ತಿಳಿಸಿದರು. ಈ ಕಾರಣದಿಂದ ನಾಗರಿಕರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಸಮಯ, ಹಣ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಭೂ ಪರಿವರ್ತನೆಯಿಂದ ಹಿಡಿದು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯುವವರೆಗೆ ಕನಿಷ್ಠ ಆರು ಇಲಾಖೆಗಳ ಬಳಿ ಸಾರ್ವಜನಿಕರು ಅಲೆದಾಡಬೇಕಾಗಿದೆ. 11-ಇ ನಕ್ಷೆಗಾಗಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಭೂ ಪರಿವರ್ತನೆಗಾಗಿ ಕಂದಾಯ ಇಲಾಖೆ, ನಿವೇಶನದ ವಿನ್ಯಾಸ ಅನುಮೋದನೆ, ಕಟ್ಟಡ ನಕ್ಷೆಯ ತಾಂತ್ರಿಕ ಅನುಮೋದನೆ ಹಾಗೂ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರ, ನಮೂನೆ 11-ಎ, ಕಟ್ಟಡ ಪರವಾನಿಗೆ ಹಾಗೂ ಕದನಂಬ್ರಕ್ಕಾಗಿ ಗ್ರಾಮ ಪಂಚಾಯತ್, ಕಟ್ಟಡದ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ಕಾರ್ಮಿಕ ಇಲಾಖೆ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸೇರಿದಂತೆ ಅನೇಕ ಇಲಾಖೆಗಳ ಅನುಮತಿ ಅಗತ್ಯವಿರುವುದನ್ನು ಶಾಸಕರು ಸದನಕ್ಕೆ ವಿವರಿಸಿದರು.

ಈ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸುವುದು ಸಾಧ್ಯವಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ ಸಂಖ್ಯೆ 64(5)ಕ್ಕೆ ತಿದ್ದುಪಡಿ ತಂದು ಗ್ರಾಮಾಂತರ ಯೋಜನಾ ನಿಯಮವನ್ನು ಜಾರಿಗೆ ತಂದು ನಿವೇಶನದ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಗ್ರಾಮೀಣ ಜನರು ನಗರ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವಿಕೆ ತಪ್ಪಿ, ಸಮಯ ಹಾಗೂ ವೆಚ್ಚ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.

ಸರ್ಕಾರ ಇಂತಹ ಜನಪರ ಹಾಗೂ ಸುಧಾರಣಾತ್ಮಕ ಕ್ರಮ ಕೈಗೊಂಡರೆ, ಆಡಳಿತದ ವಿಕೇಂದ್ರೀಕರಣಕ್ಕೆ ಬಲ ಸಿಗುವುದರೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತಷ್ಟು ಮೆರುಗು ಬರುತ್ತದೆ ಎಂದು ಶಾಸಕರು ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts