ಪಾಣಾಜೆ: ಹೈಕೋರ್ಟ್ ಆದೇಶವನ್ನು ಮೀರಿ ಖಾಸಗಿ ಸಂಸ್ಥೆಗೆ ಕಾನೂನು ಬಾಹಿರವಾಗಿ ಜಾಗ ನೀಡಲು ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮುಂದಾಗಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಗ್ರಾಪಂ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪಾಣಾಜೆ ಗ್ರಾಮದ ಸರ್ವೆ ನಂಬರ್ 79ರಲ್ಲಿ 1.15 ಎಕರೆ ಜಾಗವನ್ನು ಪಾಣಾಜೆ ಗ್ರಾಮ ಪಂಚಾಯಿತಿಗೆ ಕಾಯ್ದಿರಿಸಿದ್ದು, ಪಂಚಾಯತ್ ಸದಸ್ಯರ ಪೂರ್ಣ ಒಪ್ಪಿಗೆ ಇಲ್ಲದೇ, ಮಸೀದಿಯ ದಫನ ಜಾಗಕ್ಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿ ಪಂಚಾಯತ್ ಹಿತದೃಷ್ಟಿಯನ್ನು ನೋಡಬೇಕೆ ಹೊರತು ಖಾಸಗಿ ಹಿತಾಸಕ್ತಿ ಮುಖ್ಯ ಆಗಬಾರದು. ಇದು ಕಾನೂನು ಬಾಹಿರ ಕೂಡ. ತಾಪಂ ಇಒ ಅವರು ತನಿಖೆ ನಡೆಸಬೇಕು. ಕಾನೂನು ಬಾಹಿರ ನಿರ್ಣಯವನ್ನು ಅನೂರ್ಜಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಗ್ರಾಮ ಪಂಚಾಯಿತಿಗೆ ಕಾಯ್ದಿರಿಸಿದ್ದ ಜಾಗವನ್ನು ದಫನ ಭೂಮಿಗೆ ನೀಡಲು ನಿರ್ಣಯ ಕೈಗೊಂಡಿರುವ ಪಾಣಾಜೆ ಗ್ರಾಪಂ ಅಧ್ಯಕ್ಷರು ಗ್ರಾಮಸ್ಥರಿಗೆ ದ್ರೋಹ ಎಸಗಿದ್ದಾರೆ. ಇದು ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಮಾತನಾಡಿ, ಸಂಜೀವ ಮಠoದೂರು ಶಾಸಕರಾಗಿದ್ದ ಸಂದರ್ಭದಲ್ಲಿ ನಾರಾಯಣ ಪೂಜಾರಿ ಅಧ್ಯಕ್ಷರಾಗಿದ್ದಾಗ 1.15 ಎಕರೆ ಜಾಗವನ್ನು ಪಂಚಾಯತ್ ಹೆಸರಲ್ಲಿ ಕಾಯ್ದಿರಿಸಲಾಗಿದೆ. ಈ ಜಾಗದಿಂದ ಧಪನ ಭೂಮಿಗೆ ಪಂಚಾಯತ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ ಅದನ್ನು ಕಡೆಗಣಿಸಿ ಒತ್ತಾಯ ಪೂರ್ವಕವಾಗಿ ಪಿಡಿಒ ಮೂಲಕ ಅಧ್ಯಕ್ಷರು ನಿರ್ಣಯ ಬರೆಯಿಸಿರುವುದು ಸಂವಿಧಾನ ವಿರೋಧಿ, ಸರ್ವಾಧಿಕಾರ ಧೋರಣೆಯಾಗಿದೆ. ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಪಾಣಾಜೆ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಯ್ದಿರಿಸಿದ ಜಾಗವನ್ನು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೀಡಬಾರದು ಮತ್ತು ಹಿಂದಿನ ಸಾಮಾನ್ಯ ಸಭೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರ ನಿರ್ಣಯವನ್ನು ರದ್ದುಗೊಳಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಿದರು. ಪ್ರತಿಭಟನಾಕಾರರು ಪಿಡಿಒಗೆ ಮನವಿ ನೀಡಿದರು.
ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಅನಿಲ್ ತೆಂಕಿಲ, ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಪಂಚಾಯತ್ ಸದಸ್ಯರಾದ ಭಾರತಿ ಭಟ್, ಸುಭಾಶ್ ರೈ ಸಿ.ಎಚ್., ಸುಲೋಚನಾ, ಮೋಹನ ನಾಯ್ಕ, ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರೇಮ್‌ರಾಜ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಮಾಜಿ ಸದಸ್ಯರಾದ ರಘುನಾಥ ಪಾಟಾಳಿ,ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು ನಿರ್ದೇಶಕಿ ಪುಷ್ಪಾವತಿ, ಯಶೋಧಾ ಉಡ್ಡಂಗಳ, ತಾ.ಪಂ. ಮಾಜಿ ಅದ್ಯಕ್ಷೆ ಸವಿತಾ ಎಂ. ಜಿ, ನಿಡ್ಪಳ್ಳಿ ಬಿಜೆಪಿ ಶಕ್ತಿ ಕೆಂದ್ರದ ಅಧ್ಯಕ್ಷ ಸಂತೋಷ್ ಕುಮಾರ್, ಗ್ರಾಮಸ್ಥರಾದ ರಮಾನಂದ ರೈ, ಸದಾಶಿವ ರೈ ಸೂರಂಬೈಲು, ಮಂಜುನಾಥ್ ಪೈ, ಸುಜಿತ್ ಕಜೆ, ಪ್ರದೀಪ್ ಪಾಣಾಜೆ ಮೊದಲಾದವರು ಉಪಸ್ಥಿತರಿದ್ದರು.

























