ಮಂಗಳೂರು: ಕರಾವಳಿ ಭಾಗದ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ, ವಕೀಲರು ಆದ ಶ್ರೀ ಐವನ್ ಡಿ ಸೋಜಾ ರವರ ನೇತೃತ್ವದಲ್ಲಿ, ಜಿಲ್ಲೆಯ ವಕೀಲರ ನಿಯೋಗವು ದಿನಾಂಕ 3 12 2025 ರಂದು ಮಂಗಳೂರಿನ ಸರ್ಕ್ಯೂಟ್ ಹೌಸಿನಲ್ಲಿ, ಕರ್ನಾಟಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು, ಕರಾವಳಿ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ, ಹೈಕೋರ್ಟ್ ಪೀಠ ಮಂಗಳೂರಿನಲ್ಲಿ ಆರಂಭಿಸುವುದು ಅತಿ ಅಗತ್ಯವಾಗಿರುವುದನ್ನು ನಾನು ಮನ ಗಂಡಿರುತ್ತೇನೆ. ಈ ವಿಚಾರದಲ್ಲಿ ಕರ್ನಾಟಕದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ವಕೀಲರ ನಿಯೋಗದಲ್ಲಿ ಹಿರಿಯ ವಕೀಲರಾದ ಟಿ ಎನ್ ಪೂಜಾರಿ, ನೂರುದ್ದೀನ್ ಸಾಲ್ಮರ, ಎಂ ಆರ್ ಬಲ್ಲಾಳ್, ಯಶವಂತ ಮರೋಲಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ದ.ಕ.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೋಸ್ಟ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ, ಕಾರ್ಯದರ್ಶಿ ಚಿನ್ಮಯ ರೈ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಮಹಮ್ಮದ್ ಅಸ್ಕರ್ ಮಂಗಳೂರು ಹಾಗೂ ಕರಾವಳಿ ಜಿಲ್ಲೆಯ ವಿವಿಧ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

























