ಪುತ್ತೂರು: ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಸೆ. 29ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಎವಿಜಿ ಅಸೋಸಿಯೇಟ್ಸ್, ಎವಿಜಿ ಕನ್’ಸ್ಟ್ರಕ್ಷನ್, ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಗಳನ್ನು ಮುನ್ನಡೆಸುತ್ತಿರುವ ಎವಿಜಿ ಸಂಸ್ಥೆಯಿಂದ ಸಹಕಾರಿ ಕ್ಷೇತ್ರಕ್ಕೆ ಕೊಡುಗೆಯಾಗಿ ಜಿಲ್ಲಾ ಮಟ್ಟದ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ಲೋಕಾರ್ಪಣೆಗೊಳ್ಳುತ್ತಿದೆ ಎಂದರು.
ಸೋಮವಾರ ಬೆಳಗ್ಗೆ ಸೊಸೈಟಿ ಕಚೇರಿಯಲ್ಲಿ ಬೆಳಗ್ಗೆ 6 ಗಂಟೆಗೆ ಗಣಹೋಮ ನಡೆಯಲಿದೆ. 9.30ಕ್ಕೆ ಬೆಂಗಳೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಕಚೇರಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೋಶ ಉದ್ಘಾಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಗಣಕಯಂತ್ರವನ್ನು, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ ಎಂದರು.
10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಶೋಕ್ ರೈ ದೀಪ ಪ್ರಜ್ವಲಿಸಲಿದ್ದಾರೆ. ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ ಪ್ರಥಮ ಸಾಲ ಪತ್ರ ವಿತರಣೆ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಪ್ರಥಮ ಠೇವಣಿ ಪತ್ರ ವಿತರಣೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಸಂಸ್ಥೆಯ ಚಿಹ್ನೆ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಸೌಹಾರ್ದ ಸಹಕಾರ ನಿರ್ದೇಶಕಿ ಭಾರತಿ ಜಿ.ಭಟ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನೆಯ ಅಂಗವಾಗಿ 2025ರ ವರ್ಷಾಂತ್ಯದೊಳಗೆ ಇರಿಸಲಾಗುವ ಎಲ್ಲ ಠೇವಣಿಗಳಿಗೆ ಶೇ. 0.25 ಅಧಿಕ ಬಡ್ಡಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಉಮೇಶ ಮಳುವೇಲು, ನಿರ್ದೇಶಕಾರದ ಎ.ವಿ. ನಾರಾಯಣ, ಸೀತಾರಾಮ ಕೇವಳ, ಗುಡ್ಡಪ್ಪ ಗೌಡ ಬಲ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಿರ್ದೇಶಕಿ ಪ್ರತಿಭಾದೇವಿ ಉಪಸ್ಥಿತರಿದ್ದರು.