ಕರಾವಳಿ

ಸೆ. 7 – 9: ಯುವಜನರ ನಡಿಗೆ ಉದ್ಯೋಗದ ಕಡೆಗೆ ಡಿವೈಎಫ್ಐನಿಂದ ಯುವಜನ ಜಾಥಾ | ಪುತ್ತೂರು ಸಹಿತ ಜಿಲ್ಲಾದ್ಯಂತ ಸಂಚರಿಸಲಿದೆ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಯುವಜನರ ನಡಿಗೆ ಉದ್ಯೋಗದ ಕಡೆಗೆ ಯುವಜನ ಜಾಥಾ ಸೆಪ್ಟೆಂಬರ್ 7, 8, 9ರಂದು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.

akshaya college

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಉದ್ಘಾಟನೆಗೊಂಡಿದ್ದು, ಬಳಿಕ ಉಪ್ಪಿನಂಗಡಿಗೆ ಆಗಮಿಸಿ ಊಟದ ವಿರಾಮ ಪಡೆಯಲಿದೆ. 3 ಗಂಟೆ ಸುಮಾರಿಗೆ ಪುತ್ತೂರಿಗೆ ಆಗಮಿಸಿ ಸಂಜೆ 5 ಗಂಟೆಗೆ ಬಿ.ಸಿ.ರೋಡ್ ಗೆ ತೆರಳಲಿದೆ. ರಾತ್ರಿ 7ಕ್ಕೆ ಬಜಾಲ್ ನಲ್ಲಿ ವಿರಮಿಸಲಿದೆ.

ಸೆ. 8ರಂದು ಬೆಳಿಗ್ಗೆ 9.30ಕ್ಕೆ ವಾಮಂಜೂರು, ಮಧ್ಯಾಹ್ನ 12ಕ್ಕೆ ಗುರುಪುರ ಕೈಕಂಬ, 2 ಗಂಟೆಗೆ ಮೂಡಬಿದ್ರೆ, 3.30ಕ್ಕೆ ಮುಲ್ಕಿ, 4.30ಕ್ಕೆ ಸುರತ್ಕಲ್, ರಾತ್ರಿ 7ಕ್ಕೆ ಬೆಂಗರೆಯಲ್ಲಿ ವಿರಾಮ ಪಡೆಯಲಿದೆ. ಸೆ. 9ರಂದು ಬೆಳಿಗ್ಗೆ 9.30ಕ್ಕೆ ಮುಡಿಪು, 11.30ಕ್ಕೆ ದೇರಳಕಟ್ಟೆ, ಮಧ್ಯಾಹ್ನ 1 ಗಂಟೆಗೆ ಅಬ್ಬಕ್ಕ ಸರ್ಕಲ್, 1.30ಕ್ಕೆ ಮಾಸ್ತಿಕಟ್ಟೆ ಉಳ್ಳಾಲ, 3 ಗಂಟೆಗೆ ತೊಕ್ಕೊಟ್ಟು, ಸಂಜೆ 4.30ಕ್ಕೆ ಜ್ಯೋತಿ ವೃತ್ತಕ್ಕೆ ಆಗಮಿಸಿ ಬಳಿಕ ರ್ಯಾಲಿ ಆರಂಭವಾಗಲಿದೆ. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ (ಜ್ಯೋತಿ) ಕ್ಲಾಕ್ ಟವರ್ ವರೆಗೆ ಮೆರವಣಿಗೆ ನಡೆದು ಬಳಿಕ ಬೃಹತ್ ಸಾರ್ವಜನಿಕ ಸಭೆ ಜರುಗಲಿದೆ ಎಂದರು.

ನಿರುದ್ಯೋಗದ ಸಮಸ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಗರಿಷ್ಟ ಮಟ್ಟ ತಲುಪುತ್ತಿದೆ. ನವ ಉದಾರವಾದ ನೀತಿಗಳು ವೇಗ ಪಡೆಯುತ್ತಿದ್ದಂತೆ ನಿರುದ್ಯೋಗದ ದರವೂ ಹೊಸ ಎತ್ತರಕ್ಕೆ ಎರುತ್ತಿದೆ. ಪ್ರತೀ ಕುಟುಂಬದಲ್ಲೂ ಕನಿಷ್ಟ ಒಬ್ಬ ನಿರುದ್ಯೋಗಿ ಇದ್ದಾನೆ ಎನ್ನುವಷ್ಟು ನಿರುದ್ಯೋಗ ಇಂದು ಮನೆ ಮನೆ ಸಮಸ್ಯೆಯಾಗಿ ವ್ಯಾಪಕತೆ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಎಲ್ಲೆಡೆ ಹತಾಶ ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಇಲ್ಲಿರುವ ನೂರಾರೂ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಿ ಸರ್ಟಿಫಿಕೇಟ್ ಪಡೆದು ಹೊರಬರುತ್ತಿದ್ದರೂ ಅದಕ್ಕೆ ಅರ್ಹವಾದ ಶೇಕಡಾ 5ರಷ್ಟು ಉದ್ಯೋಗಗಳು ಅವಿಭಜಿತ ದ.ಕ ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿಲ್ಲ. ಇಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳು ದುಬಾರಿ ದರ ಪಡೆದು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ. ಕೇಂದ್ರ ಸರಕಾರ ವರುಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಈಡೇರಿಸದೆ ಇರುವ ಉದ್ಯೋಗಳನ್ನು ಕಳೆದುಕೊಳ್ಳುವಂತಹ ತಪ್ಪಾದ ನೀತಿಗಳನ್ನು ಜಾರಿಗೊಳಿಸಿ ಇರುವ ಉದ್ಯೋಗಾವಕಾಶಗಳನ್ನು ನಾಶಪಡಿಸುತ್ತಿವೆ. ಕೇವಲ ಕರ್ನಾಟಕ ರಾಜ್ಯ ಸರಕಾರಿ ಇಲಾಖೆಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಭರ್ತಿ ಆಗದೆ ಖಾಲಿ ಬಿದ್ದಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ ಅವುಗಳು ಹಿಂದೆ ಬಿದ್ದಿವೆ. ಇರುವ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಗುತ್ತಿಗೆ. ಹೊರ ಗುತ್ತಿಗೆ ಪದ್ಧತಿಗಳೆಂಬ ಅರೆ ಸಂಬಳದ, ಉದ್ಯೋಗ ಭದ್ರತೆ ಇಲ್ಲದ ಆಧುನಿಕ ಜೀತ ಪದ್ಧತಿಗಳು ಜಿಲ್ಲೆಯ ಉದ್ಯಮಗಳಲ್ಲಿ ವಿಜೃಂಭಿಸುತ್ತಿವೆ. ಕರಾವಳಿಯ ಮತ್ತೋ ದ್ಯಮ, ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ರಬ್ಬರ್ ಕೃಷಿಗಳಿಂದ ಉದ್ಯೋಗ ಸೃಷ್ಟಿಯಾಗುವ ಉದ್ಯಮಗಳನ್ನು ಸ್ಥಾಪಿಸುವ ವ್ಯಾಪಕ ಅವಕಾಶಗಳು ಇದ್ದರೂ ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು, ಸರಕಾರ ಆಲೋಚನೆಯನ್ನೆ ಮಾಡಿಲ್ಲ. ಸಮುದ್ರ, ನದಿಗಳು, ಅರಣ್ಯ ಹೀಗೆ ವಿಪುಲ ಅವಕಾಶಗಳನ್ನು ಬಳಸಿ ಉದ್ಯೋಗ ಸೃಷ್ಟಿಯ ಕಣೋಟದ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿಲ್ಲ. ಅಲ್ಲದೆ ಓಬಿರಾಯನ ಕಾಲದಲ್ಲಿ ಮಂಜೂರಾದ ಸರಕಾರಿ ಹುದ್ದೆಗಳು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿದ್ದರೂ ಅವುಗಳನ್ನೂ ಭರ್ತಿಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಮಂಗಳೂರು ನಗರ ಹಾಗು ಆಸುಪಾಸಿನಲ್ಲಿ ಹಲವು ಉದ್ಯಮಗಳು, ವ್ಯಾಪಾರೀ ಸಂಸ್ಥೆಗಳು, ಬೃಹತ್ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಇವೆ. ಬಂದರು. ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ವಲಯದ ಹಲವು ದೊಡ್ಡ ಕೈಗಾರಿಕೆಗಳು ಇಲ್ಲಿವೆ. ಸಾಕಷ್ಟು ವಿಶಾಲವಾದ ಬೈಕಂಪಾಡಿ, ಯೆಯ್ಯಾಡಿ, ಗಂಜಿಮಠ, ಮುಡಿಪು ಕೈಗಾರಿಕಾ ವಲಯವೂ ಇದೆ. ಇಷ್ಟೆಲ್ಲಾ ಇದ್ದರೂ ಸ್ಥಳೀಯ ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ, ಒದಗಿಸುವಲ್ಲಿ ಅವು ಸೋತಿವೆ. ಉತ್ತರ ಭಾರತದ ರಾಜ್ಯಗಳಿಂದ ಅಗ್ಗದ ಕಾರ್ಮಿಕರನ್ನು ಕರೆ ತಂದು ಜೀತದ ಮಾದರಿಯಲ್ಲಿ ದುಡಿಸಲಾಗುತ್ತಿದೆ. ಬ್ಯಾಂಕುಗಳು, ರೈಲ್ವೆಗಳಲ್ಲಿ ಚಿನ್ನದಂತಹ ಖಾಯಂ ಉದ್ಯೋಗಗಳು ಹೊರ ರಾಜ್ಯದವರಿಗಷ್ಟೇ ಮೀಸಲಾಗಿದೆ. ಇತ್ತೀಚೆಗೆ ಎಮ್‌ಆರ್‌ಪಿಎಲ್, ಎಸ್ ಇ ಝಡ್ ನ ಉದ್ಯೋಗಗಳ ನೇಮಕಾತಿಯಲ್ಲಿ ಸ್ಥಳೀಯ ಯುವಜನರನ್ನು ಹೊರಗಿಡುವುದು, ವಿಮಾನ ನಿಲ್ದಾಣ ಆದಾನಿ ಗುಂಪಿನ ವಶವಾದ ತರುವಾಯ ಗುತ್ತಿಗೆ ನೌಕರರಾದ ಸ್ಥಳೀಯರನ್ನು ಹೊರಗಟ್ಟುತ್ತಿರುವುದು. ಹಾರ್ಬರ್‍ ನಲ್ಲಿ ಉದ್ಯೋಗವಕಾಶ, ಸ್ಥಳೀಯರ ಪಾಲು ಎರಡೂ ವೇಗವಾಗಿ ಇಳಿಕೆಯಾಗುತ್ತಿರುವುದು ಇದಕ್ಕೊಂದು ನಿದರ್ಶನ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯ ಎಲ್ಲಾ ಅವಕಾಶಗಳು ಇದ್ದರೂ ಸರಕಾರಗಳ ತಪ್ಪಾದ ನೀತಿಯಿಂದ ನಿರುದ್ಯೋಗಿಗಳ ಕೇಂದ್ರವಾಗಿ ಗುರುತಿಸಲ್ಪಡುತ್ತಿದೆ. ಅವಾಸ್ತವವಾದ ವಲಸೆ ಯುವಜನರ ಬದುಕಿನ ಮಹತ್ವದ ವರ್ಷಗಳನ್ನು ಬಲಿ ಪಡೆಯುತ್ತಿದೆ. ದುಬಾರಿಯಾಗಿರುವ ಉತ್ತಮ ಶಿಕ್ಷಣ ಪಡೆದೂ ನಿರುದ್ಯೋಗಿಗಳಾಗಿ, ಅರೆ ಉದ್ಯೋಗಿಗಳಾಗಿ, ನಿಕೃಷ್ಟ ವೇತನ ಮಾತ್ರ ಪಡೆದು, ಉದ್ಯೋಗ ಭದ್ರತೆ ಇಲ್ಲದೆ ಯುವಜನರು ಅಸಹಾಯಕರಾಗುತ್ತಿದ್ದಾರೆ ಎಂದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಯುವಜನರ ಪಾಲಿಗೆ ಕರಾಳವಾದ ನಿರುದ್ಯೋಗದ ಈ ಭೀಕರ ಸಮಸ್ಯೆಗೆ ಎದುರಾಗಿ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಯುವಜನರ ಬೃಹತ್ ಆಂದೋಲನವನ್ನು ಕೈಗೆತ್ತಿಕೊಂಡಿದೆ. ತುಳುನಾಡ್‌ದ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಷೆಗೆ ಮಲ್ಲ ಪಾಲ್ ಎಂಬ ಘೋಷಣೆಯಡಿ ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸೇರಿದಂತೆ ಪ್ರತೀ ತಾಲೂಕುಗಳಲ್ಲಿ ಕೈಗಾರಿಕ ವಲಯಗಳನ್ನು ಸ್ಥಾಪಿಸುವ, ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ, ಗುತ್ತಿಗೆ ಉದ್ಯೋಗಗಳನ್ನು ಕಡಿಮೆಗೊಳಿಸಿ ಖಾಯಂ ನೌಕರರ ನೇಮಕ ಮಾಡಿಕೊಳ್ಳಲು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 7 ರಿಂದ 9ರವರೆಗೆ ಮೂರು ದಿನದ ಯುವಜನರ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಇದು ದ.ಕ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ವಿವರಿಸಿದರು.

ಜಾಥವು ಸೆಪ್ಟೆಂಬರ್ 7ರಂದು ಬೆಳ್ತಂಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆ ವೇಳೆ ಮುಖ್ಯ ಅತಿಥಿಯಾಗಿ ಖ್ಯಾತ ರಂಗಕರ್ಮಿ ಸತೀಶ್ ಶೆಟ್ಟಿ ಹಿರಿಯಡ್ಕ, ಡಿವೈಎಫ್‌ಐ ರಾಜ್ಯ ಅಧ್ಯಕ್ಷರಾದ ಲವಿತ್ರ ವಸ್ತದ್ ಭಾವಹಿಸಲಿದ್ದಾರೆ. ಸೆಪ್ಟೆಂಬರ್ 9ರಂದು ಸಮಾರೋಪದ ವೇಳೆ ಪ್ರಮುಖ ಭಾಷಣಗಾರರಾಗಿ ಎಂ. ವಿಜಿನ್ ಶಾಸಕರು, ಡಿವೈಎಫ್‌ಐ ಕೇಂದ್ರ ಸಮಿತಿ ಸದಸ್ಯರು, ಮುಖ್ಯ ಅತಿಥಿಗಳಾಗಿ ಡಿವೈಎಫ್‌ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಪ್ರೊ. ಫಣಿರಾಜ್ ಭಾಗವಹಿಸಲಿದ್ದಾರೆ. ಸಾರ್ವಜನಿಕ ಸಭೆಯ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಯುವಜನರ ಬೃಹತ್ ಮೆರವಣೆಗೆ ನಡೆಯಲಿರುವುದು. ಜಿಲ್ಲೆಯ ಪ್ರಜ್ಞಾವಂತ ಯುವಜನರು ಒಂದಾಗಿ ಈ ಹೋರಾಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸತೀಶನ್ ಪಿ.ಕೆ., ವಿನುಶ ರಮಣ್, ಅಭಿಷೇಕ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಎರಡೇ ದಿನದಲ್ಲಿ ಬಯಲಾದ ರಸ್ತೆ ಕಾಮಗಾರಿಯ ಅಸಲಿ ಮುಖ | ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಪುತ್ತಿಲ ಆಕ್ರೋಶ

ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು…

ಆ. 30ರಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಸಾರ್ವಜನಿಕರಿಗೂ ಜಿಲ್ಲಾಧಿಕಾರಿ ನೀಡಿದ್ದಾರೆ ಸೂಚನೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ…