ಪುತ್ತೂರು: ಪುತ್ತೂರು ಉಪ ವಿಭಾಗ ಮಟ್ಟದ ಶಾಂತಿ ಸಭೆ ಗುರುವಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ, ಪುತ್ತೂರಿನಲ್ಲಿರುವ ಬಾಂಧವ್ಯ ನಮ್ಮ ಇಲಾಖೆಗೆ ಸಂತೋಷಪಡುವ ವಿಚಾರ. ಪಾರಂಪರಿಕವಾಗಿ, ತಲೆತಲಾಂತರದಿಂದ ನಡೆದು ಬರುತ್ತಿರುವ ಆಚರಣೆಗಳಿಗೆ ಯಾವುದೇ ಆಕ್ಷೇಪಣೆ ನಮ್ಮ ಕಡೆಯಿಂದ ಇಲ್ಲ. ಆದರೆ ಕೆಲ ನಿಬಂಧನೆಗಳನ್ನು ಹಮ್ಮಿಕೊಳ್ಳುವುದು ಯಾಕೆಂದರೆ ಸಮಾಜದಲ್ಲಿ ಎಲ್ಲಾ ವಯೋಮಾನದ ಜನರಿರುತ್ತಾರೆ. ಕೆಲ ಕಿಡಿಗೇಡಿಗಳು ಉಂಟು ಮಾಡುವ ತೊಂದರೆಗಳಿಂದ ಸಮಾಜದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ. ಇಂತಹವರನ್ನು ನಿಯಂತ್ರಿಸುವ ದೃಷ್ಟಿಯಿಂದ ಕೆಲ ನಿಬಂಧನೆ ಹಾಕಬೇಕಾಗುತ್ತದೆ. ಆಚರಣೆ ಸಂದರ್ಭ ಯಾವುದೇ ಕಿರಿಕಿರಿ ಉಂಟು ಮಾಡುವ ವ್ಯಕ್ತಿಗಳಿದ್ದರೆ ಅವರನ್ನು ತಹಬದಿಗೆ ತನ್ನಿ. ಆಗದಿದ್ದರೆ ನಮ್ಮ ಗಮನಕ್ಕೆ ತನ್ನಿ. ಉದ್ರೇಕಕ್ಕೆ ಒಳಗಾಗಿ ಅನಾವಶ್ಯಕ ಕ್ರಮಗಳನ್ನು ಕೈಗೆತ್ತಿಕೊಳ್ಳದಿರಿ ಎಂದು ಕಿವಿಮಾತು ಹೇಳಿದರು.
ನಿಮ್ಮ ಆಶಯ ನಮಗೆ ಗೊತ್ತಿದೆ. ಆದರೆ ನಾವು ನಿಯಮಗಳಿಗೆ ಬದ್ಧರಾಗಿರಬೇಕಾಗಿದೆ. ಕಾನೂನುಪ್ರಕಾರ ಸಂಜೆ 6ರಿಂದ ರಾತ್ರಿ 10ರವರೆಗೆ ಮೈಕ್ ಬಳಸಬಹುದು. ನಂತರ ಬಳಸುವಂತಿಲ್ಲ. ಕಾರಣ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನಿಬಂಧನೆ. ಹಾಗೆಂದು ಇದು ಈಗ ಬಂದಿದ್ದಲ್ಲ. 2000 ಇಸವಿಯಲ್ಲೇ ಬಂದಿರುವ ಆದೇಶ. ಅದನ್ನು ಉಲ್ಲೇಖಿಸಿ ಈಗ ಆದೇಶ ನೀಡಲಾಗಿದೆ. ಇದನ್ನು ಯಾರೂ ಮೀರುವಂತಿಲ್ಲ. ಆದರೆ ಸಾರ್ವಜನಿಕರಿಂದ ಬಂದಿರುವ ಆಚರಣೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳ ಬಳಿ ಮಾತುಕತೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು. ಮನೆಗಳಲ್ಲಿ ತಮ್ಮ ಆವರಣದ ಒಳಗಡೆ ರಾತ್ರಿಯೂ ನಡೆಯುವ ಭಜನೆ ಮೊದಲಾದ ಕಾರ್ಯಕ್ರಮಗಳಿಗೆ ಅಡ್ಡಿ ಇಲ್ಲ. ಆದರೆ ರಾತ್ರಿಯ ವೇಳೆ ನಡೆಯುವ ಶೋಭಾಯಾತ್ರೆಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ. ಸ್ವಯಂಸೇವಕರನ್ನು ಸ್ಥಳದಲ್ಲಿ ನಿಯೋಜಿಸಿ. ಸಿಸಿ ಕ್ಯಾಮರಾ ಅಳವಡಿಸಿ ಎಂದು ಸಲಹೆ ನೀಡಿದ ಅವರು, ಈ ಬಾರಿ ಚೌತಿ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟೊಟ್ಟಿಗೆ ಬಂದಿದೆ. ಇದು ಭ್ರಾತೃತ್ವಕ್ಕೆ ದೇವರು ನೀಡಿದ ಸಂದೇಶವೂ ಹೌದು ಎಂದರು.
ಎಸ್.ಡಿ.ಪಿ.ಐ. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಮಾತನಾಡಿ, ಈದ್ ಮಿಲಾದ್ ದಿನ ಇನ್ನು ನಿಗದಿಯಾಗಿಲ್ಲ. ಈ ದಿನ ಮೆರವಣಿಗೆ, ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ, ಮಧ್ಯಾಹ್ನದ ಬಳಿಕ ಕಾರ್ಯಕ್ರಮಗಳು ಇವೆ. ನಮ್ಮಲ್ಲಿ ಈದ್ ಮಿಲಾದ್ ಹಾಗೂ ಚೌತಿಯನ್ನು ಸೌಹಾರ್ದವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ 2-3 ಕಡೆ ಬಹಳ ವಿಜೃಂಭಣೆಯಿಂದ ಚೌತಿ ಆಚರಣೆ ನಡೆಯುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆ ನೀಡಿದ್ದ ಪ್ರಕಟಣೆ ಕೆಲ ಗೊಂದಲಕ್ಕೆ ಕಾರಣವಾಗಿದೆ. 10 ಗಂಟೆಗೆ ಮೈಕ್ ಆಫ್ ಮಾಡಿದರೆ, ಕಾರ್ಯಕ್ರಮ ಹೇಗೆ ಎಂಬ ಪ್ರಶ್ನೆ ಮೂಡಿದೆ. ಕಿಲ್ಲೆ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ದೊಡ್ಡ ಮಟ್ಟಿಗೆ ಚೌತಿ ಆಚರಣೆ. ವಿಸರ್ಜನೆ ದಿನವಂತೂ ಬೆಳಗ್ಗಿನವರೆಗೂ ಕಾರ್ಯಕ್ರಮ. ಹಾಗೆಂದು ಡಿಜೆಗೆ ತಾನು ಕೂಡ ವಿರುದ್ಧವೆ. ಇದರಿಂದ ಯುವಕರು ನಿಯಂತ್ರಣಕ್ಕೆ ಸಿಗುವುದಿಲ್ಲ. ಆದರೆ ಉಳಿದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು. ಉಳಿದಂತೆ ಹಿಂದಿನಂತೆ ಕಾರ್ಯಕ್ರಮ ನಡೆಯಬೇಕು. ಆದ್ದರಿಂದ ಹೊಂದಾಣಿಕೆಗೆ ನಾವು ಬದ್ಧರಿದ್ದೇವೆ ಎಂದರು.
ಕುಂಬ್ರ ಶ್ರೀರಾಮ ಭಜನಾ ಮಂದಿರದ ನೇಮಿರಾಜ್ ಮಾತನಾಡಿ, ನಮ್ಮಲ್ಲಿ ಮೂರು ದಿನ ಚೌತಿ ಕಾರ್ಯಕ್ರಮ ನಡೆಯುತ್ತದೆ. ಮೊದಲ ಎರಡು ದಿನ ಮಧ್ಯರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಇದುವರೆಗೆ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ ಎಂದರು.
ಶ್ರೀ ಮಹಾಲಿಂಗೇಶ್ವರ ವಠಾರದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಮಾತನಾಡಿ, ಇದುವರೆಗೆ ಯಾವುದೇ ಅಹಿತಕರ ಘಟನೆ ಇಲ್ಲದೇ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಈ ಬಾರಿ ಡಿಜೆ ಇಲ್ಲ. ಆದರೆ ಟ್ಯಾಬ್ಲೋಗೆ ಮೈಕಾ ಬೇಕಾಗುತ್ತದೆ. ಆದ್ದರಿಂದ ಕಡಿಮೆ ಡೆಸಿಬಲ್ ನಲ್ಲಿ ಮೈಕಾವನ್ನು ಬಳಸಲು ಅನುಮತಿ ನೀಡುವಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮನವಿ ಮಾಡಿದರು.
ದ.ಕ. ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಕೆಲ ವರ್ಷದಿಂದ ಕಲ್ಲೇಗದಿಂದ ಪುತ್ತೂರುವರೆಗೆ ವಾಹನ ಜಾಥಾ ಮಾಡುತ್ತಿದ್ದೇವು. ಅದರಿಂದ ಜನರಿಗೆ ತೊಂದರೆ ಆಗುತ್ತಿರುವುದರಿಂದ ಅದನ್ನು ನಿಲ್ಲಿಸಿದೆವು. ಇದೀಗ ದರ್ಬೆಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುತ್ತಿದ್ದೇವೆ. ಇದುವರೆಗೆ ಉತ್ತಮ ರೀತಿಯಲ್ಲಿ ಕಾರ್ಯಕ್ರಮ. ಹಾಗೆಯೇ ಚೌತಿಗೂ ಮಧ್ಯರಾತ್ರಿ 12, 1 ಗಂಟೆವರೆಗೆ ಮೈಕಾಕ್ಕೆ ಅನುಮತಿ ನೀಡುವಂತೆ ವಿನಂತಿಸಿದರು.
ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ, ತಾಪಂ ಇಓ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ, ಮಹಿಳಾ ಠಾಣೆ ವೃತ್ತ ನಿರೀಕ್ಷಕ ಸುನೀಲ್ ಕುಮಾರ್, ಉಪಸ್ಥಿತರಿದ್ದರು.
ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಲೊಕೇಶ್ ಹೆಗ್ಡೆ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸುಂದರ ಪೂಜಾರಿ ಬಡಾವು, ಅಬೂಬಕ್ಕರ್ ಮಲಾರ್, ಎಸ್.ಡಿ.ಪಿ.ಐ. ಬೆಳ್ಳಾರೆ ಅಧ್ಯಕ್ಚ ರಫೀಕ್, ಹನೀಫ್ ಬಗ್ಗುಮಲೆ ಮೊದಲಾದವರು ಅಭಿಪ್ರಾಯ ತಿಳಿಸಿದರು.