ಪುತ್ತೂರು: ಕೆಯ್ಯೂರಿನ ದೇರ್ಲ ಭಾಗದಲ್ಲಿ ಹಾವಳಿ ನೀಡುತ್ತಿದ್ದ ಕಾಡಾನೆಯನ್ನು ಓಡಿಸುವ ಕಾರ್ಯಾಚರಣೆ ಗುರುವಾರ ಅರಣ್ಯ ಇಲಾಖೆ ನಡೆಸುತ್ತಿದ್ದು, ಇದೀಗ ಆನೆಯನ್ನು ಇಳಂತಾಜೆ ಭಾಗದ ಕಣಿಯೂರು ಮಲೆಯ ಕಡೆ ಬೆಂಬತ್ತಲಾಗಿದೆ.
ಕಾಡಾನೆ ಇದೀಗ ಕಣಿಯಾರು ಮಲೆಯಲ್ಲಿ ಇರುವ ಮಾಹಿತಿ ಇದ್ದು, ಅರಣ್ಯ ಇಲಾಖೆ ಸಿಬ್ಬಂದಿ ಟ್ರಾಕ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಕಣಿಯಾರು ಮಲೆಯನ್ನು ಸಂಪರ್ಕಿಸುವ ದೇರ್ಲ, ಮಾಡಾವು, ಕೌಡಿಚ್ಚಾರು ಮೊದಲಾದ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಎಸಿಎಫ್ ಸುಬ್ಬಯ್ಯ ನಾಯ್ಕ್ ತಿಳಿಸಿದ್ದಾರೆ.
ಬೆಳಗ್ಗಿನಿಂದಲೇ ದೇರ್ಲ ಭಾಗದಲ್ಲಿ ಕಾಡಾನೆ ಹಾವಳಿ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರ ಸಹಕಾರ ಪಡೆದುಕೊಂಡ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಯಿತು.
ವಾಹನದಲ್ಲಿ ಅನೌನ್ಸ್ ಮಾಡುತ್ತಾ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಇನ್ನೊಂದೆಡೆ ಅರಣ್ಯ ಇಲಾಖೆಯ ತಜ್ಞ ತಂಡ ಆನೆಯನ್ನು ಬೆಂಬತ್ತುವ ಕಾರ್ಯದಲ್ಲಿ ನಿರತವಾಯಿತು. ಗರ್ನಲ್ ಸಿಡಿಸುತ್ತಾ ಆನೆಯನ್ನು ಓಡಿಸಲಾಯಿತು ಎಂದು ಎಸಿಎಫ್ ಸುಬ್ಬಯ್ಯ ನಾಯ್ಕ್ ಮಾಹಿತಿ ನೀಡಿದರು.