ಆರೋಪಿಗಳಿಗೆ ಹಾಗೂ ಅವರಿಗೆ ಸಹಕರಿಸುವ ಎಲ್ಲರಿಗೂ ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ವೀಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, ಕೊಲೆ ಅಥವಾ ಇನ್ನಾವುದೇ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಗಳಿಗೆ ಯಾವುದೇ ರೀತಿಯ ಸಹಕಾರ ನೀಡಬಾರದು. ಉದಾಹರಣೆಗೆ ಓಡಾಡಲು ಕಾರು ನೀಡುವುದು, ತಿನ್ನಲು ಆಹಾರ ನೀಡುವುದು, ಮಾತನಾಡಲು ಫೋನ್ ನೀಡುವುದು, ಖರ್ಚಿಗೆಂದು ಹಣ ನೀಡುವುದು, ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುವುದು ಮೊದಲಾದ ರೀತಿಯ ಸಹಕಾರ ನೀಡುವುದು ಕೂಡ ಅಪರಾಧವೇ. ಹಾಗಾಗಿ ಸಹಕಾರ ನೀಡುವ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶ ರವಾನಿಸಿದ್ದಾರೆ.
ಸ್ನೇಹಿತರು, ಸಂಬಂಧಿಕರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದವರು ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಸುತ್ತಮುತ್ತಲಿನ ಜನರಿಗೆ ಇಂತಹ ಮಾಹಿತಿ ಸಿಕ್ಕಿದರೆ ನಮಗೆ ತಿಳಿಸಿ. ಅವರನ್ನು ಬಂಧಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.