Friday, November 22
Share News

ಹೊಸದಿಲ್ಲಿ: “ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಮತ್ತು ಜೈಲಿನಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ” ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಕೇಜ್ರಿವಾಲ್‌ ಬಂಧನಕ್ಕೊಳಗಾದ ನಂತರ ಪಕ್ಷ ಹೀಗೆ ಹೇಳಿದೆ.

“ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಹಾಗೆಯೇ ಉಳಿಯುತ್ತಾರೆ. ಇದರಲ್ಲಿ ಎರಡಭಿಪ್ರಾಯವಿಲ್ಲ” ಎಂದು ಪ್ರಸ್ತುತ ದಿಲ್ಲಿ ಸರ್ಕಾರದಲ್ಲಿ ನಂಬರ್ 2 ಆಗಿರುವ ಎಎಪಿಯ ಅತಿಶಿ ಹೇಳಿದ್ದಾರೆ. “ಅಗತ್ಯವಿದ್ದರೆ ಅವರು ಜೈಲಿನಿಂದಲೇ ಕೆಲಸ ಮಾಡುತ್ತಾರೆ ಎಂದು ನಾವು ಮೊದಲಿನಿಂದಲೂ ಸ್ಪಷ್ಟಪಡಿಸಿದ್ದೇವೆ. ಹಾಗೆ ಮಾಡುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಅವರಿಗೆ ಶಿಕ್ಷೆಯಾಗಿಲ್ಲ” ಎಂದು ಅತಿಶಿ ಹೇಳಿದ್ದಾರೆ.

ಕೇಜ್ರಿವಾಲ್ ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾದ ಮೊದಲ ಮುಖ್ಯಮಂತ್ರಿ. 2012ರಲ್ಲಿ ಪ್ರಾರಂಭವಾದಾಗಿನಿಂದ ಪಕ್ಷದ ಸಂಚಾಲಕರಾಗಿ ಮತ್ತು ಸುಮಾರು ಒಂದು ದಶಕದ ಕಾಲ ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ನೀಡಿರುವ ನಾಯಕತ್ವ ಹಾಗೂ ಅವರ ಸ್ಥಾನಮಾನಕ್ಕೆ ಹತ್ತಿರವಾಗುವಂತಹವರನ್ನು ಹುಡುಕುವುದು ಎಎಪಿ ನಾಯಕತ್ವಕ್ಕೆ ನಿಜವಾಗಿಯೂ ಸವಾಲು. ಪಂಜಾಬ್, ದೆಹಲಿ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕೇಜ್ರಿವಾಲ್ ಅವರ ಬಂಧನವಾಗಿದೆ. ಈ ರಾಜ್ಯಗಳಲ್ಲಿ ಅವರು ಪಕ್ಷದ ಪ್ರಮುಖ ಪ್ರಚಾರಕರೂ ಆಗಿದ್ದರು.

ಅವರು ಜೈಲಿನಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ. ಆಗಿನ ಬಿಹಾರದ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್ ಅವರು ಮೇವು ಹಗರಣದ ಪ್ರಕರಣದಲ್ಲಿ ಬಂಧಿತರಾದಾಗ, ಅವರು ತಮ್ಮ ಅಧಿಕಾರವನ್ನು ಪತ್ನಿ ರಾಬ್ರಿ ದೇವಿ ಅವರಿಗೆ ಹಸ್ತಾಂತರಿಸಿದ್ದರು. ಭೂ ಹಗರಣಕ್ಕೆ ಸಂಬಂಧಿಸಿ ಜನವರಿಯಲ್ಲಿ ಬಂಧಿತರಾಗಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಅವರು ಹುದ್ದೆಯಿಂದ ಕೆಳಗಿಳಿದ ನಂತರ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತ್ತು.

ಕೇಜ್ರಿವಾಲ್ ರಾಜೀನಾಮೆ ನೀಡದಿರುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸುತ್ತಿದೆ. ಕೇಜ್ರಿವಾಲ್‌ ಸಾರ್ವಜನಿಕ ಸೇವಕರಾಗಿರುವ ಕಾರಣ ಕೇಂದ್ರವು ಅವರನ್ನು ಅಮಾನತು ಅಥವಾ ಹುದ್ದೆಯಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಬಂಧನಕ್ಕೊಳಗಾದ ಸರ್ಕಾರಿ ಅಧಿಕಾರಿಗಳಿಗೆ ಅನುಸರಿಸುವ ವಿಧಾನವೂ ಇದೇ ಆಗಿದೆ. ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬಹುದು.

ತಿಹಾರ್ ಜೈಲಿನಲ್ಲಿ ಉನ್ನತ ಸ್ಥಾನದಲ್ಲಿರುವ ಮೂಲಗಳ ಪ್ರಕಾರ, ಜೈಲಿನಿಂದ ಯಾರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಯಾವುದೇ ನಿದರ್ಶನವಿಲ್ಲ. ಜೈಲು ಕೈಪಿಡಿಯಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜೈಲು ಕೈಪಿಡಿಯ ಪ್ರಕಾರವೇ ಎಲ್ಲವನ್ನೂ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅರವಿಂದ ಕೇಜ್ರಿವಾಲ್ ಅವರು ಒಂಬತ್ತನೇ ಬಾರಿಗೆ ವಿಚಾರಣೆಗೆ ಸಮನ್ಸ್ ತಪ್ಪಿಸಿದ ನಂತರ ಅವರನ್ನು ಬಂಧಿಸಲಾಗಿದೆ. ದೆಹಲಿ ಹೈಕೋರ್ಟ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದೆ. ಕೇಜ್ರಿವಾಲ್‌ ಅವರ ತಂಡ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಒತ್ತಾಯಿಸಿದೆ.

ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಭಾರತ್ ರಾಷ್ಟ್ರ ಸಮಿತಿಯ ಕೆ. ಕವಿತಾ ಅವರೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ; ಎಎಪಿಯ ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಅವರು ಈಗ ರದ್ದಾಗಿರುವ ಮದ್ಯ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲು ಮದ್ಯದ ಲಾಬಿಗಳಿಗೆ ಲಾಭಕಾರಕವಾಗಿ ಕೆಲಸ ಮಾಡಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

ಕೆಲವು ಆರೋಪಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳಲ್ಲಿ ಕೇಜ್ರಿವಾಲ್ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಸಂಸ್ಥೆ ಆರೋಪಿಸಿದೆ. ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ. ಅವರ ಬಂಧನದ ನಂತರ ಅವರ ಖಾತೆಗಳನ್ನು ದಿಲ್ಲಿಯ ಸಂಪುಟದಲ್ಲಿ ಹಲವಾರು ನಾಯಕರ ನಡುವೆ ಹಂಚಲಾಗಿತ್ತು.


Share News

Comments are closed.

Exit mobile version