ಉಡುಪಿ: ರಂಗಸ್ಥಳದಲ್ಲಿ ವೇಷ ನಿರ್ವಹಿಸಿ ಚೌಕಿಗೆ ಮರಳಿ ಬಣ್ಣ ತೆಗೆಯುವ ಮೊದಲೇ ಮಹಿಷಾಸುರ ಪಾತ್ರಧಾರಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಮಂದಾರ್ತಿ ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ನಡೆದಿದೆ.
ಮಂದಾರ್ತಿ ಎರಡನೇ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ (51) ಮೃತ ಕಲಾವಿದ.
ಬುಧವಾರ ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ಈ ಘಟನೆ ನಡೆದಿದೆ. 2ನೇ ಮೇಳದ ಕಲಾವಿದರಾದ ಈಶ್ವರ ಗೌಡ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿ.
ಹೃದಯಾಘಾತವಾದ ಹಿನ್ನೆಲೆಯಲ್ಲಿ ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಲಾವಿದ ಈಶ್ವರ ಗೌಡ ಅವರು ಶಿವರಾಜಪುರ, ಮೇಗರವಳ್ಳಿ, ಮಡಾಮಕ್ಕಿ, ಅಮೃತೇಶ್ವರೀ, ಮಂದಾರ್ತಿ ಮೇಳಗಳಲ್ಲಿ ಸುಮಾರು ಮೂರು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದರು. ಪೌರಾಣಿಕ ಪುರುಷ ಪಾತ್ರಗಳನ್ನು ಸಮರ್ಥವಾಗಿ ರಂಗದಲ್ಲಿ ಪ್ರಸ್ತುತಗೊಳಿಸುವ ಕಲಾಸಿದ್ಧಿ ಪಡೆದಿದ್ದರು. ಅವರ ಅಂತ್ಯ ಸಂಸ್ಕಾರ ಇಂದು ಶೃಂಗೇರಿ ಸನಿಹದ ನೆಮ್ಮಾರು ಗ್ರಾಮದ ಬುಕ್ಡಿಬೖಲಿನಲ್ಲಿ ಜರಗಲಿದೆ. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.



























