ಪುತ್ತೂರು: ಖರೀದಿಸಿದ ಅಶೋಕ್ ಲೈಲ್ಯಾಂಡ್ ಕಂಪೆನಿಯ ಬಡಾ ದೋಸ್ತ್ ವಾಹನದಲ್ಲಿ ನಿರಂತರ ದೋಷ ಉಂಟಾದ ಗ್ರಾಹಕರಿಗೆ ನಷ್ಟ ಪರಿಹಾರ ನೀಡುವಂತೆ ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಅಶೋಕ್ ಲೈಲ್ಯಾಂಡ್ ಕಂಪೆನಿಯ ಬಡಾ ದೋಸ್ತ್ ವಾಹನವನ್ನು ಖರೀದಿಸಿದ ಬಳಿಕ ಅದರಲ್ಲಿ ನಿರಂತರ ಸಮಸ್ಯೆಗಳು ಉಂಟಾದ ಕಾರಣ ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದೂರದಾರರ ಪರವಾಗಿ ತೀರ್ಪು ನೀಡಿದೆ.
ಪುತ್ತೂರಿನ ಪದ್ಮನಾಭ ಪ್ರಭು ಅವರು 2021ರಲ್ಲಿ ಖರೀದಿಸಿದ ವಾಹನದಲ್ಲಿ ನಿರಂತರ ಸಮಸ್ಯೆ ಕಂಡು ಬಂದಿದ್ದವು. ಈ ಬಗ್ಗೆ ಅವರು 2022ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ತಜ್ಞರಿಂದ ವಾಹನದ ಪರಿಶೀಲನೆಗೂ ಅರ್ಜಿ ಸಲ್ಲಿಸಲಾಗಿತ್ತು.
ದೂರಿನಲ್ಲಿ ಅಶೋಕ ಲೈಲ್ಯಾಂಡ್ ಕಂಪೆನಿ ಹಾಗೂ ಮಂಗಳೂರು ಹಾಗೂ ಪುತ್ತೂರಿನ ಡೀಲರ್‌ಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು. ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಸದ್ರಿ ವಾಹನದಲ್ಲಿ ತಯಾರಿಕ ದೋಷ ಇದೆ ಎಂಬ ದೂರುದಾರರ ವಾದವನ್ನು ಎತ್ತಿ ಹಿಡಿದರು.
ಪ್ರತಿವಾದಿಗಳಾದ ಅಶೋಕ್ ಲೇಲ್ಯಾಂಡ್ ಕಂಪೆನಿ ಮತ್ತು ಡೀಲರ್‌ಗಳು ದೂರುದಾರರಿಗೆ ವಾಹನದ ಮೊತ್ತ ರೂ. 7,50,321ರೂ. ಅನ್ನು ಮೊತ್ತವನ್ನು ಶೇ. 6 ಬಡ್ಡಿದರದಲ್ಲಿ ಮರಳಿಸುವಂತೆ ಆದೇಶ ನೀಡಿದೆ.
ದೂರುದಾರರಿಗೆ ಆಗಿರುವ ಮಾನಸಿಕ ವೇದನೆಗೆ 25 ಸಾ. ರೂ. ಹಾಗೂ ವ್ಯಾಜ್ಯ ವೆಚ್ಚವಾಗಿ 10 ಸಾ. ರೂ. ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ದೂರುದಾರರ ಪರವಾಗಿ ಪುತ್ತೂರಿನ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಭುವನೇಶ್ವರಿ ಎಂ., ರಕ್ಷಿತಾ ಬಂಗೇರ ವಾದಿಸಿದ್ದರು.