ಪಡುಬಿದ್ರಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದು ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ. 66ರಲ್ಲಿ ಗುರುವಾರ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7ಜನರು ಗಾಯಗೊಂಡಿದ್ದಾರೆ.
ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು.
ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮುಗುಚಿ ಬಿದ್ದಿದೆ ಎಂದು ಹೇಳಲಾಗಿದೆ.



























