ಬೆಂಗಳೂರು: ಚಾರ್ಜಿಂಗ್ ಹಾಕಿದ್ದ ಇವಿ ಬೈಕ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಸುಟ್ಟು ಕರಕಲಾದ ಭಯಾನಕ ಘಟನೆ ಬೆಂಗಳೂರಿನ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮುಕೇಶ್ ಎಂಬುವವರಿಗೆ ಸೇರಿದ ಈ ಇವಿ ಬೈಕ್, ಮನೆಯ ಬೇಸ್‌ಮೆಂಟ್‌ನಲ್ಲಿ ಚಾರ್ಜಿಂಗ್‌ನಲ್ಲಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಚಾರ್ಜಿಂಗ್‌ನಲ್ಲಿದ್ದ ಎಲೆಕ್ಟಿಕ್ ಬೈಕ್ ಒಂದು ಇದ್ದಕ್ಕಿದ್ದಂತೆ ಸ್ಪೋಟಗೊಂಡು ಬೆಂಕಿಗಾಹುತಿಯಾಗಿದೆ. ಸ್ಪೋಟದಿಂದಾಗಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಸೈಕಲ್ ಕೂಡ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಮನೆಗೆ ಆವರಿಸುವ ಮುನ್ನ ಸ್ಥಳೀಯರು ಬೈಕ್ ಅನ್ನು ಹೊರಗೆ ಎಳೆದು ಹಾಕಿದ್ದಾರೆ. ಇದರಿಂದಾಗಿ ಮನೆಗೆ ಹೊತ್ತಿಕೊಳ್ಳುವುದು ತಪ್ಪಿದೆ. ಸುದ್ದಿ ತಿಳಿದ ಕೂಡಲೇ ರಾಜಾಜಿನಗರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.