ಉಳ್ಳಾಲದ ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ
ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನ ಬ್ರೇಕ್ ವಿಫಲಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಶೆಲ್ಪರ್‌ಗೆ ಢಿಕ್ಕಿ ಹೊಡೆದಿದೆ.
ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ನಾಲ್ವರು (ಮೂರು ಮಹಿಳೆಯರು, ಒಬ್ಬ ಪುರುಷ) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ಒಂದೇ ಕುಟುಂಬದವರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಜೊತೆಗೆ ಒಂದು ಮಗು ಸಹ ದುರಂತದಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಶೆಲ್ಟರ್ ಹತ್ತಿರ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿದ್ದವರೂ ಸಹ ಅಪಘಾತಕ್ಕೆ ಒಳಗಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಏಳು ಮಂದಿಯನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.























