ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಚಶೋತಿ (Chashoti) ಪ್ರದೇಶದಲ್ಲಿಂದು ಸಂಭವಿಸಿದೆ ಮೇಘಸ್ಪೋಟದಿಂದ ಪ್ರವಾಹ (Massive Cloudburst) ಉಂಟಾಗಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಈವರೆಗೆ ಇಬ್ಬರು CISF ಜವಾನರು ಸೇರಿ ಒಟ್ಟು 40 ಮಂದಿ ಸಾವನ್ನಪ್ಪಿದ್ದರೆ, 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 220 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ.
ಕಿಶ್ಚಾರದ ಚಶೋತಿಯಲ್ಲಿರುವ ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ಭಕ್ತರು ತೀರ್ಥಯಾತ್ರೆ ಕೈಗೊಳ್ಳುವ ಹಾದಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಬದುಕುಳಿದವರ ರಕ್ಷಣೆಗಾಗಿ ಶೋಧ ನಡೆಸುತ್ತಿವೆ. ಯಾತ್ರಿಕರನ್ನ ಸ್ಥಳಾಂತರ ಮಾಡುತ್ತಿದ್ದು ಮತ್ತೊಂದೆಡೆ ಮೃತಪಟ್ಟವರ ಮೃತದೇಹಗಳನ್ನೂ ಹೊರತೆಗೆಯಲಾಗುತ್ತಿದೆ. ಮೇಘಸ್ಫೋಟ ಪೀಡಿತ ಪ್ರದೇಶಕ್ಕೆ ಎರಡು ತಂಡಗಳನ್ನು ರವಾನಿಸಲಾಗಿದೆ ಎಂದು ಎನ್‌ಡಿಆರ್‌ಎಫ್ (NDRF) ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನ ಸಂಸದರೂ ಆಗಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಮೇಘಸ್ಫೋಟವು ಭಾರೀ ಪ್ರಮಾಣದಲ್ಲಿ ಸಂಭವಿಸಿದೆ. ಶೀಘ್ರದಲ್ಲೇ ನಮಗೆ ಹೆಚ್ಚಿನ ವಿವರಗಳು ತಿಳಿಯಲಿವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು. ವೈದ್ಯಕೀಯ ಚಿಕಿತ್ಸೆಗಾಗಿ ಆಡಳಿತವು ಹೆಲಿ-ರಕ್ಷಣಾ ವ್ಯವಸ್ಥೆಗಳನ್ನು ಸಹ ಮಾಡುತ್ತದೆ ಎಂದಿದ್ದಾರೆ.
ಸ್ವಾತಂತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು ದುರಂತ ನೆನೆದು ಮೃತರಿಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಕಿಶ್ವಾರ್‌ನಲ್ಲಿ ಮೇಘಸ್ಫೋಟದಿಂದ ಉಂಟಾದ ದುರಂತದ ಹಿನ್ನೆಲೆಯಲ್ಲಿ ನಾಳೆ ಸಂಜೆ ‘ಅಟ್ ಹೋಮ್’ ಟೀ ಪಾರ್ಟಿಯನ್ನ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಬೆಳಗಿನ ಸ್ವಾತಂತ್ರ್ಯ ಸಮಯದಲ್ಲಿ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮುಂದುವರಿಸದಿರಲು ನಿರ್ಧರಿಸಿದ್ದು. ಔಪಚಾರಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ನಿರ್ಧರಿಸಿದ್ದೇವೆ. ಭಾಷಣ, ಮೆರವಣಿಗೆ ಇತ್ಯಾದಿಗಳು ನಿಗದಿಪಡಿಸಿದಂತೆ ನಡೆಯಲಿವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.