ಕುಡಿತದ ಚಟ ಬಿಡಲು ಸೇವಿಸಿದ ನಾಟಿ ಔಷಧ ಮೂವರ ಜೀವವನ್ನೇ ಬಲಿ ಪಡೆದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಇದೇ ಔಷಧ ಸೇವಿಸಿದ ಇನ್ನೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇಡಂ ತಾಲೂಕಿನ ಬುರುಗಪಲ್ಲಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ ಪಟ್ಟಣದ ಗಣೇಶ ಬಾಬು ರಾಠೋಡ (24) ಮತ್ತು ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕುಡಿತದ ಚಟವನ್ನು ಬಿಡಲು ಸ್ಥಳೀಯವಾಗಿ ಲಭ್ಯವಾದ ನಾಟಿ ಔಷಧ ಸೇವಿಸಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ.
ಇದೇ ಔಷಧವನ್ನು ಸೇವಿಸಿದ ಲಕ್ಷ್ಮೀ ನರಸಿಂಹಲು ಪುತ್ರ ನಿಂಗಪ್ಪ ನರಸಿಂಹಲು ಗಂಭೀರ ಸ್ಥಿತಿಯಲ್ಲಿದ್ದು, ಕಲಬುರಗಿಯ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಔಷಧದ ಮೂಲ, ಅದರ ಗುಣಮಟ್ಟ ಮತ್ತು ತಯಾರಿಕೆ ಪರಿಶೀಲಿಸಲಾಗುತ್ತಿದೆ. ಈ ಔಷಧವನ್ನು ಯಾರು ಸರಬರಾಜು ಮಾಡಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.