ಅಪಘಾತ

ಯೂಟ್ಯೂಬ್ ನೋಡಿ ಡಯಟ್; ವಿದ್ಯಾರ್ಥಿ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಯೂಟ್ಯೂಬ್ ನೋಡಿ ತೂಕ ಇಳಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

akshaya college

ಮೂರು ತಿಂಗಳಿಂದ ಹಣ್ಣಿನ ದ್ರವಾಹಾರ ಮಾತ್ರ ಸೇವಿಸುತ್ತಿದ್ದ ಹದಿನೇಳು ವರ್ಷದ ಯುವಕನೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕೊಳಚೆಲ್‌ನಲ್ಲಿ ನಡೆದಿದೆ.

17 ವರ್ಷದ ಶಕ್ತಿಸ್ವರನ್ ಮೃತ ಯುವಕ. ಆತ ಆರೋಗ್ಯವಾಗಿದ್ದ. ಕಳೆದ ಮೂರು ತಿಂಗಳಿಂದ ಆತ ಕಟ್ಟುನಿಟ್ಟಿನ ಆಹಾರ ಪದ್ಧತಿ ಪಾಲನೆ ಮಾಡುತ್ತಿದ್ದ. ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರ ಸಲಹೆಯನ್ನು ಸಹ ಪಡೆಯದೆ ಯೂಟ್ಯೂಬ್‌ನಲ್ಲಿ ಬ್ಲಾಗರ್ಸ್ ಕೊಡುವ ಆರೋಗ್ಯದ ಟಿಪ್ಸ್ ನೋಡಿ ಹಣ್ಣಿನ ಜ್ಯೂಸ್ ಮಾತ್ರ ಸೇವಿಸುವ ಆಹಾರ ಕ್ರಮ ಅನುಸರಿಸುತ್ತಿದ್ದ. ಇದರ ಜತೆಗೆ ಕೆಲವು ಔಷಧ ಸೇವಿಸುತ್ತಿದ್ದ. ಜಿಮ್‌ಗೆ ಸೇರಿದ್ದ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.

ಕಳೆದ ಜುಲೈ 25ರಂದು ಶಕ್ತಿಸ್ವರನ್ ಮನೆಯಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದುಬಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ, ಆಹಾರ ಕ್ರಮದಿಂದಾಗಿ ಈ ದುರ್ಘಟನೆ ಸಂಭವಿಸಿದೆಯೇ ಎಂದು ವರದಿ ಬಂದ ಬಳಿಕವಷ್ಟೆ ತಿಳಿಯಬೇಕಿದೆ. ಶಕ್ತಿಸ್ವರನ್ ಎಂಜಿನಿಯ‌ರ್ ಕಾಲೇಜಿಗೆ ಹೋಗಲು ತಯಾರಿ ನಡೆಸಿಕೊಳ್ಳುತ್ತಿದ್ದ. ಆತ ದಪ್ಪಗಿದ್ದ ಕಾರಣ ಯಾರಿಂದಲೂ ಗೇಲಿಗೊಳಗಾಗುವುದನ್ನು ತಪ್ಪಿಸಿಕೊಳ್ಳಲು ತಾನೇ ಯೂಟ್ಯೂಬ್ ನೋಡಿ ಡಯಟ್ ಮಾಡಲು ಆರಂಭಿಸಿದ್ದ. ಕೆಲವೊಮ್ಮೆ ಶೀತ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts