ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಪತ್ರೋಸ್ ಹೆಸರಿನ ಖಾಸಗಿ ಬಸ್ಸಿನಿಂದ ರಸ್ತೆಗೆ ಬಿದ್ದು ಕೊಳ್ಳಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ(43)ಸಾವು. ಜು. 07ರಂದು ಬೆಳಗ್ಗೆ ವಿಟ್ಲದಿಂದ ಹೊರಟಿದ್ದ ಬಸ್ಸಿಗೆ ಕೊಡಂಗಾಯಿ ಎಂಬಲ್ಲಿಂದ ಚಿದಾನಂದ ರೈ ಪ್ರಯಾಣಿಸಿದ್ದರು.
ಕುಡ್ತಮುಗೇರು ಸ್ಟಾಪ್ ಬರುವ ಮೊದಲೇ ಚಿದಾನಂದ ರೈ ಬಸ್ಸಿನ ಫುಟ್ ಬೋರ್ಡಲ್ಲಿ ನಿಂತಿದ್ದ ಸಂದರ್ಭ ಆಯತಪ್ಪಿ ರಸ್ತೆಗೆ ಬಿದ್ದು ಅಲ್ಪಸ್ವಲ್ಪ ಗಾಯಗೊಂಡಿದ್ದರು. ಬಸ್ಸಿನ ಸಿಬ್ಬಂದಿಗಳು ತಕ್ಷಣವೇ ನಿಲ್ಲಿಸಿ ಉಪಚರಿಸಿದಾಗ ನನಗೇನೂ ಆಗಿಲ್ಲ, ನೀವು ಹೋಗಿ ಎಂದು ಸ್ವತಃ ಗಾಯಾಳು ಚಿದಾನಂದ ರೈ ಹೇಳಿದ್ದಾರೆಂದು ಸಹಪ್ರಯಾಣಿಕರು ತಿಳಿಸಿದ್ದಾರೆ. ಒಂದಿಷ್ಟು ಕುಡಿತದ ಚಟ ಹೊಂದಿದ್ದ ಚಿದಾನಂದ ಸಂಜೆ ಅಸ್ವಸ್ಥಗೊಂಡ ಕಾರಣ ಸ್ಥಳೀಯರು ವಿಟ್ಲದ ಸಮುದಾಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ಕುಡ್ತಮುಗೇರಿನ ಯುವಕರು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದರು. ಆದರೆ ಮಂಗಳವಾರ ಮಧ್ಯಾಹ್ನದ ಸಮಯ ಚಿಕಿತ್ಸೆಗೆ ಸ್ಪಂದಿಸದೇ ಚಿದಾನಂದ ರೈ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.