ಪುತ್ತೂರು: ಗಾಳಿ – ಮಳೆಗೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಟ್ರಾನ್ಸ್’ಫಾರ್ಮರ್ ರಸ್ತೆಗೆ ಅಡ್ಡವಾಗಿ ಬಿದ್ದ ಘಟನೆ ಮುಕ್ವೆಯ ಮಣಿಯದಲ್ಲಿ ನಡೆದಿದೆ.
ಟ್ರಾನ್ಸ್’ಫಾರ್ಮರ್ ಬೀಳುವ ರಭಸಕ್ಕೆ ಆಸುಪಾಸಿನ ಐದು ವಿದ್ಯುತ್ ಕಂಬಗಳು ಧರೆಗುರುಳಿದೆ. ವಿದ್ಯುತ್ ತಂತಿಗಳು ರಸ್ತೆ ತುಂಬಾ ಹರಡಿಕೊಂಡಿವೆ.
ಮುಕ್ವೆ ಶಾಲೆಯಿಂದ ಎಲಿಕಕ್ಕೆ ಹೋಗುವ ರಸ್ತೆ ಇದಾಗಿದೆ. ಶಾಲಾ ಮಕ್ಕಳು ಮನೆಗಳಿಗೆ ತೆರಳಿದ ನಂತರ ಅಂದರೆ ಸುಮಾರು 5 ಗಂಟೆಗೆ ಮರ ಬಿದ್ದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಮಕ್ಕಳು, ನಾಗರಿಕರು ಇರಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ.
ಮಳೆಗಾಲದ ಆರಂಭದಲ್ಲೇ ಅಪಾಯಕಾರಿ ಮರಗಳ ತೆರವಿಗೆ ಶಾಸಕ ಅಶೋಕ್ ರೈ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು. ಆದರೂ ಅಪಾಯಕಾರಿ ಮರಗಳ ತೆರವು ಆಗದೇ ಇರುವುದು ಇದೀಗ ಬೆಳಕಿಗೆ ಬಂದಿದೆ. ಶಾಲೆ ಬಿಡುವ ಹೊತ್ತಿಗೆ ಮರ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಶಾಸಕ, ಸಚಿವರ ಮಾತನ್ನು ಇಲಾಖೆ ಪಾಲಿಸುತ್ತಿದ್ದರೆ, ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿರಲಿಲ್ಲ. ಮಳೆಗಾಲದ ಮುನ್ನೆಚ್ಚರಿಕೆ ಪಾಲಿಸಲು ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.




































