ರಸ್ತೆಯಲ್ಲೇ ಲಾರಿ ನಿಲ್ಲಿಸಿ ತೆರಳುವ ಚಾಲಕರ ನಿರ್ಲಕ್ಷ್ಯತನಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. ಪುತ್ತೂರು ಪೇಟೆಯಲ್ಲಿ ಮೊನ್ನೆಯಷ್ಟೇ ಬಲಿಯಾಗಿದ್ದು, ಇದೀಗ ವಿಟ್ಲದಲ್ಲೂ ಅದೇ ರೀತಿಯ ಘಟನೆ ನಡೆದಿದ್ದು, ಸವಾರ ಕೊನೆಯುಸಿರೆಳೆದಿದ್ದಾರೆ.
ನಿಂತಿದ್ದ ಮಣ್ಣಿನ ಲಾರಿ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಮಂಗಳಪದವು ಎಂಬಲ್ಲಿ ಶುಕ್ರವಾರ ನಡೆದಿದೆ.
ಇರ್ಫಾನ್ (19) ಮೃತಪಟ್ಟವರು. ಸಹಸವಾರ ಫಾರಿಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಕ್ಕೆತ್ತೂರು ಮೂಲದ ಇಬ್ಬರು ಯುವಕರು ಮಂಗಳಪದವು ಕಡೆಗೆ ತೆರಳುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಬಾಕ್ಸೈಟ್ ಮಣ್ಣು ಸಾಗಾಟ ಮಾಡುತ್ತಿದ್ದ ಅದರ ಚಾಲಕ ಮಂಗಳಪದವು ಎಂಬಲ್ಲಿ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿದ್ದು, ಅದಕ್ಕೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಬ್ಬರನ್ನೂ ಮಂಗಳೂರು ಆಸ್ಪತ್ರೆ ಗೆ ಕೊಂಡೊಯ್ಯಲಾಗಿದ್ದು, ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಬೇಜಾಬ್ದಾರಿತನದಿಂದ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ಚಾ ಕುಡಿಯಲು ಹೋಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪುತ್ತೂರಿನ ಉರ್ಲಾಂಡಿಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ರಾತ್ರಿ ವೇಳೆ ಶಾಮಿಯಾನದ ಲಾರಿ ಬೈಪಾಸ್ ರಸ್ತೆಯಲ್ಲೇ ಲಾರಿ ನಿಲ್ಲಿಸಿದ್ದ. ಲಾರಿಗೆ ಪಾರ್ಕ್ ಲೈಟ್ ಕೂಡ ಹಾಕಿರಲಿಲ್ಲ. ಇದೇ ವೇಳೆ ಮಳೆಯೂ ಸುರಿಯುತ್ತಿದ್ದು, ಸಹೋದರಿ ಮನೆಗೆ ಹೊರಟಿದ್ದ ಸುದೀಪ್ ಅವರ ಬೈಕ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಮನೆಗೆ ಆಧಾರಸ್ತಂಭವಾಗಿದ್ದ ಸುದೀಪ್ ದಾರುಣವಾಗಿ ಮೃತಪಟ್ಟಿದ್ದರು.