ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಇರುವೈಲು ಗ್ರಾಮದ ಬಂಗಾರುಗುಡ್ಡೆಯಲ್ಲಿ ಇಂದು ನಡೆದಿದೆ.
ಕೃಷಿಕ ಕುಟುಂಬದ ಲಿಲ್ಲಿ ಡಿ’ಸೋಜಾ (64) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಲಿಲ್ಲಿ ಡಿ’ಸೋಜಾ ಅವರು ಬೆಳಗ್ಗೆ ಎದ್ದು ಮನೆಯ ಹಿಂಬದಿಯ ಬಾಗಿಲು ತೆರೆದು ಹೊರಗೆ ಕಾಲಿಟ್ಟ ಸಂದರ್ಭದಲ್ಲಿ, ರಾತ್ರಿಯ ವೇಳೆ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದಾರೆ.
ಇದರಿಂದಾಗಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಲಿಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಕೆಯ ಚೀತ್ಕಾರ ಕೇಳಿ ಓಡಿ ಬಂದ ಆಕೆಯ ಪುತ್ರನಿಗೆ ಆಕೆ ಮೃತಪಟ್ಟಿರುವುದು ಕಂಡುಬಂದಿದೆ. ಆಗ ವಿದ್ಯುತ್ ಸಂಪರ್ಕವೂ ಕಡಿದುಹೋಗಿತ್ತು.
ನಿನ್ನೆ ಮಧ್ಯಾಹ್ನ ಲಿಲ್ಲಿ ಅವರು ಮನೆಯ ಹಿಂಭಾಗದ ವಿದ್ಯುತ್ ಲೈನಿನ ಸರ್ವೀಸ್ ವೈರ್‌ನಲ್ಲಿ ಸ್ಪಾರ್ಕ್ ಆಗುತ್ತಿರುವ ಬಗ್ಗೆ ಮೆಸ್ಕಾಂ ಕಚೇರಿಗೆ ದೂರವಾಣಿ ಮೂಲಕ ತಿಳಿಸಿದ್ದರು.
ಆದರೆ, ಮೆಸ್ಕಾಂ ಅಧಿಕಾರಿಗಳು ಈ ಸಮಸ್ಯೆಯ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ನಿರ್ಲಕ್ಷದ ಕಾರಣಕ್ಕೆ ಜನಾಕ್ರೋಶಗೊಂಡ ಸ್ಥಳೀಯರು ಮೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.