ಪುತ್ತೂರು: ಹೆರಿಗೆಯ ಸಂದರ್ಭ ಹೊಟ್ಟೆಯಲ್ಲೇ ಬಟ್ಟೆ ಉಳಿದು, ಅದನ್ನು ತಿಳಿದ ಬಳಿಕವೂ ತೆರವು ಮಾಡದೆ ಪುತ್ತೂರು ಸಿಟಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ದೇಹದ ವಿವಿಧ ಭಾಗಕ್ಕೆ ಹೋದ ಕಾರಣದಿಂದ ಪತ್ನಿಯ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು ಎಂದು ಗಗನ್ ದೀಪ್ ಬಿ. ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳಿಂದ ಪತ್ನಿ 33 ವರ್ಷದ ಶರಣ್ಯ ಲಕ್ಷ್ಮಿ ಬಿ ಮಾನಸಿಕ ಯಾತನೆಯಲ್ಲಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮುಂದೆ ಇಂತಹ ಸ್ಥಿತಿ ಯಾರಿಗೂ ಬರಬಾರದು. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ತನಿಖೆಯನ್ನು ಒದಗಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ನ. 27ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪತ್ನಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ಡಿ. 2ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಇದಾದ ಬಳಿಕ ವಿಪರೀತ ಜ್ವರ ಬಂದಿದ್ದು, ಹೆರಿಗೆ ಮಾಡಿಸಿದ ಡಾ. ಅನಿಲ್ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಜ್ವರದ ಔಷಧಿಯನ್ನು ಬಳಸುವಂತೆ ಸೂಚಿಸಿದ್ದಾರೆ. ಹೊಟ್ಟೆಯ ಎಡದ ಭಾಗದಲ್ಲಿ ಜಗ್ಗಿದ್ದು, ಬಲ ಭಾಗದಲ್ಲಿ ಕೈಗೆ ಏನೋ ಸಿಕ್ಕಿದ ಅನುಭವ ಪತ್ನಿಗೆ ಆಗುತ್ತಿತ್ತು. ಎರಡು ದಿನದಲ್ಲಿ ಜ್ವರ ಕಮ್ಮಿಯಾಗದ ಸಂದರ್ಭ ಮತ್ತೆ ವಿಚಾರಿಸಿದಾಗ ವೈದ್ಯರು ಹೆಮಟೋಮ್ ಆಗಿರಬಹುದೆಂಬ ಹೇಳಿದ್ದಲ್ಲದೆ ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ ಎಂದಿದ್ದಾರೆ. ಮತ್ತೆ ಮತ್ತೆ ಕೇಳಿದಾಗ ಆಲ್ಟ್ರಾ ಸೌಂಡ್ ಮಾಡಬಹುದೆಂದು ಹೇಳಿದ್ದಾರೆ. ಇದರಲ್ಲಿ 10 ಸೆ.ಮೀ. ಮಾಪ್ ಪಾರ್ಮೇಶನ್ ಇರುವುದು ಕಂಡು ಬಂದಿದೆ. ಬೇರೆ ಔಷಧಿಯನ್ನು ನೀಡಿದ್ದು, ಜ್ವರ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನದಲ್ಲಿ ಸಂಧಿ ನೋವು ಪ್ರಾರಂಭವಾಗಿದ್ದು, ಈ ಬಗ್ಗೆಯೂ ವೈದ್ಯರಲ್ಲಿ ವಿಚಾರಿಸಿದಾಗ ಆರ್ಥೋ ಇರಬಹುದೆಂದು ಹೇಳಿದ್ದಾರೆ. ಕೆಲವು ದಿನ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ತಿಳಿಸಿದಾಗ ರುಮೊಟೋಲೋಜಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ. ಮಂಗಳೂರಿನ ತಜ್ಞರು ವರದಿಗಳನ್ನು ಪರಿಶೀಲನೆ ನಡೆಸಿ ಸಿಸರೇಯಿನ್ ಮಾಡಿದ ವೈದ್ಯರಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ 10 ಸೆ.ಮೀ. ಮಾಪ್ ತೋರಿಸುತ್ತಿದ್ದರೂ ಯಾಕೆ ತೆರವು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಸಿಟಿಸಿ ಸ್ಕ್ಯಾನ್ ಮಾಡಿದಾಗ ಸರ್ಜಿಕಲ್ ಮಾಪ್ ಅನ್ನು ಸೂಚಿಸುವ ಗ್ಲಾಸಿಪಿಗೋಮಾ ಇದೆಯೆಂಬುದು ಬೆಳಕಿಗೆ ಬಂದಿದ್ದು, ಒಂದುವರೆ ತಿಂಗಳು ಆಗಿರುವ ಕಾರಣ ಈಗಲೇ ಅಪಾಯದ ಸ್ಥಿತಿ ತಲುಪಿದೆ ಎಂದಿದ್ದಾರೆ. ದ್ವಿತೀಯ ಅಭಿಪ್ರಾಯ ಪಡೆದು ತಕ್ಷಣ ಅದನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.
ಸಂಬಂಧಿಕರಾದ ಶಿವಪ್ರಸಾದ್ ಸರಳಿ, ಶಿವಕುಮಾರ್ ಉಪಸ್ಥಿತರಿದ್ದರು.
ದೂರು ದಾಖಲು:
ವಿವಿಧ ಕಡೆಯಲ್ಲಿ ದೂರು:
ಘಟನೆಯಿಂದ ಮಹಿಳೆ ಚೇತರಿಸುತ್ತಿದ್ದಂತೆ ವಿಚಾರ ಹೊರ ಪ್ರಪಂಚಕ್ಕೆ ತೆರೆದುಕೊಂದಿದ್ದು, ಪಿ.ಜಿ. ಪೋರ್ಟಲ್ ನಲ್ಲಿ ಮೊದಲು ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಾರೀ ದೊಡ್ಡ ಸುದ್ದಿ ಮಾಡಿದೆ. ಫೆ. 22ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯತೆಯ ಬಗ್ಗೆ ದೂರು ನೀಡಲಾಗಿದೆ. ಫೆ.23ರಂದು ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ. ಅನಿಲ್ ಎಸ್. ಅವರ ಮೇಲೆ ಪುತ್ತೂರು ಪೊಲೀಸ್ ನಿರೀಕ್ಷರಿಗೆ ದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲೂ ದೂರು ದಾಖಲಿಸಲಾಗಿದೆ. ಪತ್ನಿ ಆರೈಕೆಯಲ್ಲಿ ಜತೆಗೆ ಇರಬೇಕಾದ ಹಿನ್ನಲೆಯಲ್ಲಿ ಕುದ್ದು ಇಲಾಖೆಗಳಿಗೆ ಹೋಗಿ ದೂರು ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಎಲ್ಲ ಕಡೆಗೆ ಇಮೇಲ್ ಹಾಗೂ ಪೋರ್ಟಲ್ ಮೂಲಕ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.
4 ತಾಸಿನ ಶಸ್ತ್ರಚಿಕಿತ್ಸೆ!
ಜ. 25ರಂದು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ಡಾ. ವಿವೇಕ್ ಕಜೆ ನೇತೃತ್ವದಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆಯನ್ನು ತೆರವು ಮಾಡಲಾಗಿದೆ. ಜ್ವರ ಬರುತ್ತಿತ್ತು, ಸೋಂಕು ತಗುಲಿದ ಬಗ್ಗೆ ವರದಿಗಳು ಬಂದವು. ಸೋಂಕಿಗೆ ಕಾರಣವಾದ ರೋಗಾಣುಗಳು ರಕ್ತದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಲಂಗ್ಸ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ, ರಕ್ತದ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳು ಈ ಸಂದರ್ಭ ಕಾಣಿಸಿಕೊಂಡಿದೆ. ಸಿಟಿ ಸ್ಕ್ಯಾನ್ ಮೂಲಕ ಸೋಂಕು ತಗುಲಿದಲ್ಲಿ ಕೀವು ತುಂಬಿರುವುದು ತಿಳಿದು ಬಂದಿದ್ದು, ತಕ್ಷಣ ಅದನ್ನು ಆಧುನಿಕ ತಂತ್ರಜ್ಞಾನ ಬಳಸಿ ತೆಗೆಯುವ ಕಾರ್ಯವಾಗಿದೆ. ಬೇಕಾದ ಎಲ್ಲಾ ಚಿಕಿತ್ಸೆಗಳೂ ತ್ವರಿತವಾಗಿ ನಡೆದಿದೆ. ವೈದ್ಯರು ಸಾಕಷ್ಟು ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಸುಮಾರು 22 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗಗನ್ ದೀಪ್ ತಿಳಿಸಿದರು.
ಮೆಡಿಕಲ್ ಬೋರ್ಡ್ ನಿಯಮ!
ಆಪರೇಷನ್ ಮಾಡುವ ಸಂದರ್ಭ ಥಿಯೇಟರ್ ಒಳಗೆ ತೆಗೆದುಕೊಂಡು ಹೋದ ವಸ್ತುಗಳು ಹಾಗೂ ಕೊನೆಯಲ್ಲಿ ಉಳಿಕೆಯಾದ ವಸ್ತುಗಳನ್ನು ತಾಳೆ ಹಾಕಿ ಸರಿಯಿದೆ ಎಂದು ದೃಢೀಕರಿಸಬೇಕು. ಆ ಬಳಿಕ ಆಪರೇಷನ್ ಮಾಡಿದ ಜಾಗವನ್ನು ಮುಚ್ಚಬೇಕೆಂಬುದು ಮೆಡಿಕಲ್ ಬೋರ್ಡ್ ನಿಯಮವಿದೆ. ಆಪರೇಷನ್ ಥಿಯೇಟರಿನಲ್ಲಿ ಎಲ್ಲವೂ ಟ್ಯಾಲಿ ಇದೆ ಎಂದಾದರೆ, ಈಗ ಹೊಟ್ಟೆಯಲ್ಲಿ ದೊಡ್ಡದಾದ ಬಟ್ಟೆ ಬಾಕಿಯಾಗಿದ್ದು ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ ಗಗನ್ ದೀಪ್.
ಈ ಬಗ್ಗೆ ಸಿಟಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.