ಕಾರವಾರ: ಜಾನಪದ ಕೋಗಿಲೆ, ಪದ್ಮಶ್ರೀ ಪುರಸ್ಕೃತೆ ಸುಕ್ರಿ
ಬೊಮ್ಮಗೌಡ (88) ಅವರು ಗುರುವಾರ(ಫೆ.13) ಮುಂಜಾನೆ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಅರೋಗ್ಯ ಸುಧಾರಿಸಿ ಮನೆಗೆ ವಾಪಸ್ಸಾಗಿದ್ದರು ಆದರೆ ಗುರುವಾರ ಮುಂಜಾನೆ ಸುಮಾರು 3.30 ಗಂಟೆಯ ಹೊತ್ತಿಗೆ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದ ಸುಕ್ರಿ ಬೊಮ್ಮ ಗೌಡ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರು. ಜಾನಪದ ಶೈಲಿಯ ಹಾಡುಗಳನ್ನು ಹಾಡುತ್ತಿದ್ದುದರಿಂದ ಅವರಿಗೆ ಜಾನಪದದ ಕೋಗಿಲೆ ಎಂದೂ ಕೂಡ ಕರೆಯುತ್ತಿದ್ದರು.
ಸುಕ್ರಿ ಬೊಮ್ಮ ಗೌಡ ಅವರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅಷ್ಟು ಮಾತ್ರವಲ್ಲದೆ ನಾಡೋಜ, ಆಳ್ವಾಸ್ ನುಡಿಸಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಲಭಿಸಿವೆ.