ತ್ರಿಶೂರು : ಆರು ದಶಕಗಳ ಕಾಲ ಕೇರಳದ ಮಲಯಾಳಿ ಮನಸ್ಸುಗಳಿಗೆ ಮಧುರವಾದ ಹೃದಯಸ್ಪರ್ಶಿ ಗೀತೆಗಳನ್ನು ಉಣಿಸಿ ಭಾವಗಾಯಕನೆಂದೇ ಜನಮಾನಸದಲ್ಲಿ ಮನೆಮಾತಾಗಿದ್ದ ಪಿ.ಜಯಚಂದ್ರನ್ ವಿಧಿವಶರಾದರು. ತ್ರಿಶೂರು ಅಮಲಾ ಆಸ್ಪತ್ರೆಯಲ್ಲಿ ಜ.9ರಂದು ರಾತ್ರಿ ನಿಧನರಾದರು.ಅರ್ಬುದ ಭಾದಿತರಾಗಿ ಸುದೀರ್ಘ ದಿನಗಳಿಂದ ಅವರು ಚಿಕಿತ್ಸೆಯಲ್ಲಿದ್ದರು.
ಮಲಯಾಳಂ ಸಿನಿಮಾ ಹಿನ್ನೆಲೆ ಗಾಯನದಲ್ಲಿ ಸಾರ್ವಕಾಲಿಕ ಅತ್ಯುತ್ತಮ ಹಾಡುಗಳನ್ನು ಹಾಡಿ ಮೆರೆಸಿ, ಅಮರಗೊಳಿಸಿದ ಪಿ. ಜಯಚಂದ್ರನ್ ಅವರ ಸ್ವರ ಮಾಧುರ್ಯವೇ ಭಾವದೀಪ್ತ. ಪ್ರೀತಿ,ಪ್ರೇಮ,ವಾತ್ಸಲ್ಯ, ವಿರಹ, ದುಖಃ ಗಳಿಗೆಲ್ಲ ಧ್ವನಿಯಾಗಿ ಮೊಳಗಿದ ಆ ಕಂಠ ಇನ್ನಿಲ್ಲ. ಅವರು ಹಾಡಿದ ಗೀತೆಗಳೆಲ್ಲವೂ ಅಮರವಾಗಿದೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ 16000 ಹಾಡುಗಳನ್ನು ಹಾಡಿರುವ ಅವರು ಅತ್ಯುತ್ತಮ ಗಾಯಕನೆಂಬ ರಾಷ್ಟ್ರಪ್ರಶಸ್ತಿ, ಕೇರಳ ರಾಜ್ಯಪ್ರಶಸ್ತಿ (5ಬಾರಿ), ತಮಿಳುನಾಡು ರಾಜ್ಯ ಪ್ರಶಸ್ತಿ (4ಬಾರಿ), ಕಲೈಮಾಮಣಿ ಪಶಸ್ತಿ ಪಡೆದಿದ್ದಾರೆ. ಅಲ್ಲದೇ ದ.ಭಾರತ ಸಹಿತ ಕೇರಳದ ಅನೇಕ ಪುರಸ್ಕಾರ ಮುಡಿದಿದ್ದಾರೆ. ಮೃತರು ಪತ್ನಿ ಲಲಿತ, ಪುತ್ರ ಗಾಯಕನಾದ ದೀನನಾಥ್, ಮಗಳು ಲಕ್ಷ್ಮಿ ಎಂಬಿವರನ್ನಗಲಿದ್ದಾರೆ.