ನಕ್ಸಲರಿಗಾಗಿ ಜಂಟಿ ಕಾರ್ಯಾಚರಣೆ ನಂತರ ವಾಪಸ್ ಆಗುತ್ತಿದ್ದ ಸೇನಾ ವಾಹನ ನಕ್ಸಲೀಯರು ಅಡಗಿಸಿಟ್ಟ ಐಇಡಿ ಸ್ಫೋಟಗೊಂಡು ಎಂಟು ಮಂದಿ ಯೋಧರು ಹಾಗೂ ಚಾಲಕ ಸೇರಿ ಒಂಬತ್ತು ಜನರು ಹುತಾತ್ಮರಾಗಿರುವ ಘಟನೆ ಸೋಮವಾರ (ಜ.06) ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.
ಐಇಡಿ ಸ್ಫೋಟಕ್ಕೆ ಸೇನಾ ವಾಹನ ಹಾಗೂ ಯೋಧರ ದೇಹಗಳು ಛಿದ್ರ, ಛಿದ್ರವಾಗಿ ಬಿದ್ದ ಭಯಾನಕ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಜಿಲ್ಲಾ ಮೀಸಲು ಪಡೆಯ ಯೋಧರು ದಾಂತೇವಾಡಾ, ನಾರಾಯಣ್ ಪುರ್ ಮತ್ತು ಬಿಜಾಪುರ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದ ನಂತರ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಸಮೀಪ ನಕ್ಸಲೀಯರು ಐಇಡಿ ಸ್ಫೋಟಿಸಿರುವುದಾಗಿ ಬಸ್ತಾರ್ ನ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.
ಈ ಬಗ್ಗೆ ನಾವು ಶೀಘ್ರವೇ ವಿವರವಾದ ಪ್ರಕಟನೆ ನೀಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್ ಗಢದ ಬಸ್ತಾರ್ ನಲ್ಲಿ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರು ಹತ್ಯೆಗೀಡಾದ ಘಟನೆಯ ಬೆನ್ನಲ್ಲೇ ಈ ಐಇಡಿ ಸ್ಫೋಟ ನಡೆದಿರುವುದಾಗಿ ವರದಿ ವಿವರಿಸಿದೆ.