ಮಂಗಳೂರು: ಸೈಬರ್ ವಂಚನೆಗಾಗಿ ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ, ಮಂಗಳೂರು ನಗರ ಪೊಲೀಸರು ಅಂತರ್‌ರಾಜ್ಯ ಜಾಲಕ್ಕೆ ಸೇರಿದ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣವನ್ನು ತನಿಖೆ ನಡೆಸಿದ ಮಂಗಳೂರು ನಗರ ಪೋಲಿಸ್ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ (ರಸೂಲ್), ಉತ್ಪಲ ಸಂತೋಷ್ ಕೃಷ್ಣ, ಕರ್ನೂಲಿನ ಬುಡಿದಿನ್ನೆ ವಂಶಿ (ಗುರು), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್, ಬುಡೆ ಶ್ರೀನಿವಾಸ ಹಾಗೂ ಮುಲ್ಕಿಯ ಇಬ್ರಾಹೀಂ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ “ಬ್ಯಾಂಕ್ ಖಾತೆಗೆ 4ರಿಂದ 6 ಶೇಕಡಾ ಕಮಿಷನ್” ನೀಡುವ ಆಮಿಷದ ಜಾಹೀರಾತುಗಳನ್ನು ನೀಡಲಾಗುತ್ತಿತ್ತು. ಇದನ್ನು ನಂಬಿದ ಕೆಲವರಿಂದ ಬ್ಯಾಂಕ್ ವಿವರಗಳು ಹಾಗೂ ಓಟಿಪಿ ಪಡೆದು, ಆ ಮಾಹಿತಿಯನ್ನು ವಿದೇಶದಲ್ಲಿರುವ ಸಹಚರರಿಗೆ ಕಳುಹಿಸಲಾಗುತ್ತಿತ್ತು. ನಂತರ ಆ ಖಾತೆಗಳ ಮೂಲಕ ಅನಧಿಕೃತ ಹಣ ವರ್ಗಾವಣೆ ಮಾಡಿ ವಂಚನೆ ನಡೆಸಲಾಗುತ್ತಿತ್ತು.
ಮಂಗಳೂರಿನ ಮಹಮ್ಮದ್ ಇಕ್ಬಾಲ್ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ತಾಂತ್ರಿಕ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತರ ಬಳಿಯಿಂದ 18 ಮೊಬೈಲ್ ಫೋನ್‌ಗಳು, 12 ಸಿಮ್ ಕಾರ್ಡ್‌ಗಳು, ಒಂದು ಲ್ಯಾಪ್‌ಟಾಪ್, 15 ಚೆಕ್‌ಬುಕ್‌ಗಳು, 18 ಡೆಬಿಟ್ ಕಾರ್ಡ್‌ಗಳು ಹಾಗೂ 12 ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಇನ್ನೂ ಹಲವರ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





















