ಪುತ್ತೂರು:ಪುತ್ತೂರು ಗ್ರಾಮಾಂತರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಅಂತರ್‌ರಾಜ್ಯ ಜಾಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ಇಸ್ಮಾಯಿಲ್ (28) ಹಾಗೂ ಸಂಶೀರ್ (27) ಎಂದು ಗುರುತಿಸಲಾಗಿದ್ದು, ಇವರು ಕೇರಳ ರಾಜ್ಯದ ಕೋಝಿಕೋಡ್ ಹಾಗೂ ವಯನಾಡ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಮಾದಕವಸ್ತು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ, ವಾಹನದಲ್ಲಿ ಮಾರಾಟ ಉದ್ದೇಶದಿಂದ ಸುಮಾರು ರೂ.5.38 ಲಕ್ಷ ಮೌಲ್ಯದ 53.58 ಗ್ರಾಂ ನಿಷೇಧಿತ MDMA ಮಾದಕವಸ್ತು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಆರೋಪಿಗಳು ತಮ್ಮ ಬಳಿ ಮಾರಕಾಯುಧವನ್ನು ಇಟ್ಟುಕೊಂಡಿರುವುದೂ ಪತ್ತೆಯಾಗಿದೆ.
ಬಂಧಿತರ ಬಳಿಯಿಂದ ಕಾರು, ತಲವಾರು, ಮೊಬೈಲ್ ಫೋನ್‌ಗಳು ಹಾಗೂ ರೂ.10,000 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(C), 22(C), 29 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಾದಕವಸ್ತು ಸರಬರಾಜು ಜಾಲದಲ್ಲಿ ಸಕ್ರಿಯರಾಗಿದ್ದರೆಂದು ತಿಳಿದುಬಂದಿದೆ. ಇವರು ಕೇರಳದ ಕೋಝಿಕೋಡ್, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ.ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಡಿ.ಎಸ್.ಬಿ ವಿಭಾಗದ ಪೊಲೀಸ್ ನಿರೀಕ್ಷಕ ನಂದ ಕುಮಾರ್ ನೇತೃತ್ವದ ವಿಶೇಷ ತಂಡ ಭಾಗವಹಿಸಿತ್ತು.





















