ಅಪರಾಧ

ಸಿಸಿಬಿ ಪೋಲಿಸರ ಕಾರ್ಯಾಚರಣೆ: ರೌಡಿಶೀಟರ್ ಸಜ್ವಾನ್ ಹುಸೈನ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸಜ್ವಾನ್ ಹುಸೈನ್ (42)ನನ್ನು ಬಂಧಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಅಪಹರಣ, ಸುಲಿಗೆ, ಹಲ್ಲೆ ಸೇರಿದಂತೆ ಒಟ್ಟು 31 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದ ಅಪಹರಣ, ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ 2020ರ ಫೆಬ್ರವರಿ 28ರಂದು ಮಾನ್ಯ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಾರ್ಕಳ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆಯೂ ವಿಧಿಸಲಾಗಿತ್ತು.ಈತನ ವಿರುದ್ಧ 12 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, 5 ಪ್ರಕರಣಗಳಲ್ಲಿ ಎಲ್.ಪಿ.ಸಿ ಎಂದು ಘೋಷಿಸಲಾಗಿದೆ. 2017ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಹರಣ ಮತ್ತು ಕೊಲೆ ಪ್ರಕರಣದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದನು.

ನಂತರ ಆಂಧ್ರಪ್ರದೇಶದ ರಾಯಚೋಟೆ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂಬ ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಪಡೆದು 2018ರಿಂದ ವಿದೇಶಕ್ಕೆ ಪರಾರಿಯಾಗಿದ್ದನು. ವಿದೇಶದಲ್ಲಿದ್ದ ಮಂಗಳೂರು ಮೂಲದ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡಿದ ಆರೋಪವೂ ಇದೆ.

ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ರಾಯಚೋಟೆಯಿಂದ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಮತ್ತು ನಕಲಿ ದಾಖಲೆ ಸಿದ್ಧಪಡಿಸಿದವರ ಬಗ್ಗೆಯೂ ತನಿಖೆ ಮುಂದುವರಿದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 100