ಪುತ್ತೂರು: ನಿವೃತ್ತ ಪ್ರಾಂಶುಪಾಲ, ಪುತ್ತೂರು ಕಸಬಾ ನಿವಾಸಿ ಎ.ವಿ. ನಾರಾಯಣ ಅವರ ಮನೆ ದರೋಡೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮುಡೂರು ನಿವಾಸಿ, ಪಂಜದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಾರ್ತಿಕ್ ರಾವ್ ಹಾಗೂ ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ ಎಂದು ಗುರುತಿಸಲಾಗಿದೆ.
ಡಿ. 17ರಂದು ಮಧ್ಯರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಲ್ಮೆಟ್ ಧರಿಸಿಕೊಂಡು, ಮುಖಚಹರೆಯನ್ನು ಮರೆಮಾಚಿ, ದೂರುದಾರರ ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿ ಪಿರ್ಯಾದಿದಾರರನ್ನು ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದಾರೆ. ಈ ವೇಳೆ ನಡೆದ ತಳ್ಳಾಟದಲ್ಲಿ ಪಿರ್ಯಾದಿದಾರರ ಪತ್ನಿಗೆ ಗಾಯವಾಗಿತ್ತು. ಆಗ ಜೋರಾಗಿ ಕಿರುಚಿದ್ದರಿಂದ ಹೆದರಿದ ಅಪರಿಚಿತ ಆರೋಪಿಗಳು ಮನೆಯ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದರು.
ಪಿರ್ಯಾದಿದಾರರ ಮನೆಯಲ್ಲಿದ್ದ ಯಾವುದೇ ಸೊತ್ತುಗಳು ಕಳ್ಳತನವಾಗಿರುವುದಿಲ್ಲ. ಎ.ವಿ. ನಾರಾಯಣ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 127/2025, ಕಲಂ: 307 ಜೊತೆಗೆ 3(5) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿತ್ತು.



























