ಮಂಗಳೂರು: ಮಂಗಳೂರು ನಗರ ಕಾರಾಗೃಹದಲ್ಲಿ ಸೋಮವಾರ ತಡರಾತ್ರಿ ಕಾರಾಗೃಹ ಅಧೀಕ್ಷಕರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಅಕ್ರಮವಾಗಿ ಇಟ್ಟುಕೊಂಡಿದ್ದ 2 ಮೊಬೈಲ್‌ಗಳು, 1 ಸಿಮ್ ಕಾರ್ಡ್ ಮತ್ತು 1 ಕೇಬಲ್ ರಹಿತ ಮೊಬೈಲ್ ಚಾರ್ಜರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಇವು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವುದರಿಂದ ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ನೀಡಿ ಪ್ರಕರಣ ದಾಖಲಿಸಲಾಗಿದೆ. ಇಲಾಖೆಯ ಮುಖ್ಯಸ್ಥರಾಗಿರುವ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರಿಗೆ ಮೊಬೈಲ್ ಪತ್ತೆಯಾಗಿರುವ ವಿಚಾರವನ್ನು ತಿಳಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.
ರಾಜ್ಯದ ಡಿಜಿಪಿ ಆದ ಬಳಿಕ ಎಲ್ಲಾ ಕಾರಾಗೃಹಗಳಿಗೆ ಭೇಟಿ ನೀಡಿರುವ ಅಲೋಕ್ ಕುಮಾರ್ ಅವರು ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಜೈಲಿಗೂ ಭೇಟಿ ನೀಡಿದ್ದರು.



























