ಉಜಿರೆ: ನಾಪತ್ತೆಯಾಗಿದ್ದ ಬೆಳಾಲಿನ ಪುರುಷರಬೆಟ್ಟು ನಿವಾಸಿ ಯುವಕ ರಾಜೇಶ್ ಪಿ. (30) ಅವರ ಮೃತದೇಹ ಮಂಗಳವಾರ ಬೆಳಾಲಿನ ಬಲಿಪೆಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಡಿ.27ರಂದು ಬೆಳಿಗ್ಗೆ ಮನೆಯಿಂದ ಹೊರಟ ರಾಜೇಶ್ ಅವರು ಬಳಿಕ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದರು. ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಹಲವು ದಿನಗಳಿಂದ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕಿರಲಿಲ್ಲ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸರು ಮತ್ತು ಸ್ಥಳೀಯರ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು. ಸೋಮವಾರ ಬೆಳಿಗ್ಗೆ ನೇತ್ರಾವತಿ ನದಿಯಲ್ಲಿ ಅವರ ಶವ ಪತ್ತೆಯಾಗಿದೆ.
ಮೃತರು ತಂದೆ ಜಿನ್ನಪ್ಪ ಗೌಡ, ತಾಯಿ ಚನ್ನಕ್ಕ, ಸಹೋದರ ಪ್ರಶಾಂತ್, ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ.



























