ಉಡುಪಿ: ಓದುವಂತೆ ತಾಯಿ ಬುದ್ಧಿವಾದ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಪ್ರದೇಶದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಾಲ್ಕಟ್ಟು ನಿವಾಸಿ ಮಲ್ಲಿಕಾ ಅವರ ಪುತ್ರಿ ಸಮನ್ವಿ ಎಂದು ಗುರುತಿಸಲಾಗಿದೆ.
ಸಮನ್ವಿ ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಡಿ. 26ರಂದು ಸಂಜೆ ವೇಳೆ ಮುಂಬರುವ ಪರೀಕ್ಷೆಗೆ ಓದುವಂತೆ ತಾಯಿ ಸಮನ್ವಿಗೆ ಸೂಚನೆ ನೀಡಿದ್ದರು. ಆದರೆ ಓದದೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ತಾಯಿ ಆಕೆಗೆ ಬುದ್ಧಿವಾದದ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಮನನೊಂದ ಸಮನ್ವಿ ಮನೆಯ ಮಲಗುವ ಕೋಣೆಯಲ್ಲಿನ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಕುಟುಂಬಸ್ಥರು ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























