ನ.10 ರಂದು ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣದಲ್ಲಿ NIA ಅತಿ ದೊಡ್ಡ ಪ್ರಗತಿ ಸಾಧಿಸಿದ್ದು, ಬಾಂಬ್ ಸ್ಪೋಟಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ನಾಲ್ವರು ವೈದ್ಯರನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣ ಸಂಬಂಧ ಇದುವರೆಗೂ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ.
ಸ್ಪೋಟಕ್ಕೆ ಬಳಸಿದ್ದ i20 ಕಾರನ್ನು ವ್ಯವಸ್ಥೆ ಮಾಡಿ, ಸ್ಥಳಾಂತರಿಸಿ ಮತ್ತು ಸುರಕ್ಷಿತವಾಗಿ ಸಾಗಿಸಿದ್ದಾರೆ ಎಂದು ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್‌ನ ಡಾ. ಅದೀಲ್ ಅಹ್ಮದ್ ರಾಥರ್, ಲಕ್ನೋದ ಡಾ. ಶಾಹಿನಾ ಸಯೀದ್ ಮತ್ತು ಶೋಪಿಯಾನ್‌ನ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಅವರನ್ನು ಬಂಧಿಸಲಾಗಿದ್ದು, ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು 10 ದಿನಗಳ ಕಾಲ ಎನ್ಐಎಗೆ ಒಪ್ಪಿಸಿದ್ದಾರೆ.
ಪ್ರಕರಣ ಸಂಬಂಧ ಈವರೆಗೂ 6 ಜನರ ಬಂಧನ
ಈತನ್ಮಧ್ಯೆ, ಪ್ರಕರಣ ಸಂಬಂಧ ಈಗಾಗಲೇ, ಸ್ಫೋಟದಲ್ಲಿ ಬಳಸಲಾದ ಕಾರನ್ನು ನೋಂದಾಯಿಸಲಾಗಿದ್ದ ಅಮೀರ್ ರಶೀದ್ ಅಲಿ ಮತ್ತು ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನಿಗೆ ತಾಂತ್ರಿಕ ನೆರವು ನೀಡಿದ ಡ್ಯಾನಿಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವಾನಿ ಎಂಬ ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು.
ಇನ್ನು ದಾಳಿಯ ನಂತರ ಕೇಂದ್ರ ಕೇಂದ್ರ ಗೃಹ ಸಚಿವಾಲಯವು ತನಿಖೆಯನ್ನ ಭಯೋತ್ಪಾದನಾ ನಿಗ್ರಹ ಸಂಸ್ಥೆಗೆ ವರ್ಗಾಯಿಸಿತ್ತು. ಇದರೊಂದಿಗೆ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಉಗ್ರ ಬೆಂಬಲಿಗನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ವಿವಿಧ ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟವಾಗಿ ಎನ್ಐಎ ಕಾರ್ಯನಿರ್ವಹಿಸುತ್ತಿದೆ.
ಕಾರ್ಯಾಚರಣೆಯ ಕೇಂದ್ರಬಿಂದು:
NIA ನಡೆಸಿದ ತನಿಖೆಯು ಈ ನಾಲ್ವರು ವೈದ್ಯರು ಕೇವಲ ಸ್ಪೋಟದ ಸಂಚಿನಲ್ಲಿ ಭಾಗಿದಾರರಲ್ಲ, ಬದಲಾಗಿ ಇಡೀ ಕಾರ್ಯಾಚರಣೆಯ ಕೇಂದ್ರಬಿಂದುವಾಗಿದ್ದರೆಂಬುದನ್ನು ಬಹಿರಂಗಪಡಿಸಿದೆ. ಅದರಂತೆ, ಕಾರು ಕಾನೂನಾತ್ಮಕವಾಗಿ ಬೇರೆ ವ್ಯಕ್ತಿಯ ಹೆಸರಿನಲ್ಲಿ ಖರೀದಿಸಿದ್ದರೂ, ಅದನ್ನು ಖರೀದಿಸುವುದು, ಸಾಗಿಸುವುದು, ಮರೆಮಾಡುವುದು ಹಾಗೂ ಸುರಕ್ಷತೆಯಿಂದ ನಿರ್ವಹಿಸುವ ಸಂಪೂರ್ಣ ಕಾರ್ಯಾಚರಣೆಯು ಈ ತಂಡದ ನೇರ ಹೊಣೆಗಾರಿಕೆಯಲ್ಲಿತ್ತು ಎನ್ನಲಾಗಿದೆ.
ವೇಳಾಪಟ್ಟಿ ತಯಾರು:
ಜೊತೆಗೆ ಈ ತಂಡವು ಕಾರು ಯಾವ ಮಾರ್ಗದಲ್ಲಿ, ಯಾವ ಸ್ಥಳಗಳಿಗೆ ತಲುಪಬೇಕು ಎನ್ನುವ ಸಂಪೂರ್ಣ ವೇಳಾಪಟ್ಟಿಯನ್ನೇ ರೂಪಿಸಿತ್ತು. ಅದರಂತೆ, ಕಾರನ್ನು ಎಲ್ಲಿಂದ ತೆಗೆದುಕೊಳ್ಳಬೇಕು? ದೆಹಲಿಗೆ ಸೇರುವ ಸುರಕ್ಷಿತ ಮಾರ್ಗ ಯಾವುದು? ಎಲ್ಲಿ ನಿಲ್ಲಬೇಕು? ಕಾರನ್ನು ಸಕ್ರಿಯಗೊಳಿಸುವ ಸ್ಥಳಕ್ಕೆ ಯಾವಾಗ ತಲುಪಿಸಬೇಕು? ಈ ಎಲ್ಲ ವಿವರಗಳನ್ನೂ ಡಾ. ಮುಜಮ್ಮಿಲ್ ಮತ್ತು ಡಾ. ರಾಥರ್ ಅವರು ನಿಖರವಾಗಿ ಸಿದ್ದಪಡಿಸಿದ್ದರು ಎನ್ನಲಾಗಿದೆ.
ನಿಧಿ ಸಂಗ್ರಹಣೆ, ಸಭೆ:
ಇದೇ ವೇಳೆ, ವೈದ್ಯಕೀಯ ರಕ್ಷಣೆ, ಸಂವಹನ ಮತ್ತು ಹಣದ ವಹಿವಾಟಿನ ಜವಾಬ್ದಾರಿಗಳನ್ನೂ ಅವರಿಗೆ ನೀಡಲಾಗಿತ್ತು. ಮತ್ತೊಂದೆಡೆ ಲಕ್ನೋ ಮೂಲದ ವೈದ್ಯೆ ಡಾ. ಶಾಹಿನಾ ಅವರು ವೈದ್ಯಕೀಯ ಭೇಟಿಗಳ ನೆಪದಲ್ಲಿ ನಿಧಿಸಂಗ್ರಹಣೆ ಮತ್ತು ಸಭೆಗಳನ್ನು ನಡೆಸುತ್ತಿದ್ದರು. ಜೊತೆಗೆ ಸುರಕ್ಷಿತ ಮತ್ತು ಪತ್ತೆಯಾಗದ ಸಂವಹನ ವ್ಯವಸ್ಥೆಗಳನ್ನು ಸಂಚಾಲನೆ ಮಾಡುವ ಪ್ರಮುಖ ಪಾತ್ರವೂ ಅವರದ್ದಾಗಿತ್ತು.
ವಿದೇಶಿ ಸಂಪರ್ಕಕ್ಕೆ ಕೆಲಸ:
ಮುಂದುವರೆದು, ಮುಫ್ತಿ ಇರ್ಫಾನ್ ಅಹ್ಮದ್ ಈ ದಾಳಿಗೆ ಸೈದ್ಧಾಂತಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದ್ದ. ಜೊತೆಗೆ ಗುಂಪಿನ ಸದಸ್ಯರನ್ನು ಪರಸ್ಪರ ಸಂಪರ್ಕಿಸುವುದಲ್ಲದೆ, ಮನೋಬಲವನ್ನು ಬಲಪಡಿಸುವ ಕೆಲಸ, ವಿದೇಶಿ ಸಂಪರ್ಕಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸವನ್ನು ಮಾಡುತ್ತಿದ್ದ ಎನ್ನಲಾಗಿದೆ.
ಮುಂದುವರೆದು, ಮುಫ್ತಿ ಇರ್ಫಾನ್ ಅಹ್ಮದ್ ಈ ದಾಳಿಗೆ ಸೈದ್ಧಾಂತಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದ್ದ. ಜೊತೆಗೆ ಗುಂಪಿನ ಸದಸ್ಯರನ್ನು ಪರಸ್ಪರ ಸಂಪರ್ಕಿಸುವುದಲ್ಲದೆ, ಮನೋಬಲವನ್ನು ಬಲಪಡಿಸುವ ಕೆಲಸ, ವಿದೇಶಿ ಸಂಪರ್ಕಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸವನ್ನು ಮಾಡುತ್ತಿದ್ದ.


























