ಉಗ್ರರಿಂದ ಜಪ್ತಿ ಮಾಡಿದ್ದ ಸ್ಫೋಟಕಗಳು ಪೊಲೀಸ್ ಠಾಣೆಯಲ್ಲಿ ಸ್ಫೋಟಗೊಂಡು, 9 ಮಂದಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ತಜ್ಞರು ಇದೀಗ ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆಯ ಸ್ಫೋಟ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ರಾಸಾಯನಿಕ ಸಂಯೋಜನೆಯ ಕಾರಣದಿಂದ ಸ್ಫೋಟ ಸಂಭವಿಸಿತೇ ಅಥವಾ ಸ್ಫೋಟಕಗಳಲ್ಲಿ ಟೈಮರ್ ಅಳವಡಿಸಿದ್ದರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ನವದೆಹಲಿಯ ಕೆಂಪು ಕೋಟೆ ಬಳಿ ಕಾರ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದರು. ಇದಕ್ಕೆ ಮೊದಲೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹರಿಯಾಣದ ಫರಿದಾಬಾದ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ವೈದ್ಯ ವೃತ್ತಿಯ ಉಗ್ರ ಮುಜಮ್ಮಿಲ್ ಗನೈ ಬಾಡಿಗೆ ಮನೆಯಿಂದ ವಶಪಡಿಸಿಕೊಂಡ 360 ಕಿಲೋದಷ್ಟು ಸ್ಫೋಟಗಳ ಪೈಕಿ ಒಂದಷ್ಟು ಮಾದರಿಯನ್ನು ನೌಗಾಮ್ ಪೊಲೀಸ್ ಠಾಣೆಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇಡಲಾಗಿತ್ತು.
ತಜ್ಞರ ಪ್ರಕಾರ, ಇದು ಮಾನವ ದೋಷ ಅಥವಾ ಲೋಪದಿಂದ ಆದ ಸ್ಫೋಟವಲ್ಲ. ಬದಲಿಗೆ, ತಾಪಮಾನ, ರಾಸಾಯನಿಕ ಸಂಯೋಜನೆ ಮತ್ತು ಕೆಲವು ವಿಶೇಷ ಅಂಶಗಳಿಗೆ ಸ್ಫೋಟಕಗಳು ಒಡ್ಡಿಕೊಂಡಾಗ ಸ್ಫೋಟ ಸಂಭವಿಸಿರಬಹುದು ಎಂದು ಅಭಿಪ್ರಾಯಿಸಿದೆ.
ಫರಿದಾಬಾದ್ನಿಂದ ಪೊಲೀಸ್ ಠಾಣೆಗೆ ಅಮೋನಿಯಂ ನೈಟ್ರೇಟ್ ತರಲಾಗಿತ್ತು. ಅದನ್ನು ನಿರ್ವಹಿಸುವಾಗಿನ ಲೋಪಗಳೇ ಸ್ಫೋಟ ಕಾರಣ ಇರಬಹುದು ಎಂದೂ ಹೇಳಲಾಗುತ್ತಿದೆ.
ನೌಗಾಮ್ ಪೊಲೀಸ್ ಠಾಣೆಯ ಸ್ಫೋಟದಲ್ಲಿ 9 ಮಂದಿ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದರು. ಈ ಸ್ಫೋಟವು ಎಷ್ಟು ಶಕ್ತಿಶಾಲಿಯಾಗಿತ್ತು ಎಂದರೆ, ರಕ್ಷಣಾ ತಂಡಕ್ಕೆ ಅವಶೇಷಗಳನ್ನು ತೆರವುಗೊಳಿಸಲು ಮತ್ತು ಜನರನ್ನು ರಕ್ಷಿಸುವುದು ಕಷ್ಟವಾಯಿತು. ಛಿದ್ರ ಛಿದ್ರವಾದ ಕೈಕಾಲುಗಳು 300 ಅಡಿ ದೂರದಲ್ಲಿ ಹಾರಿಬಿದ್ದಿದ್ದವು. ಸ್ಫೋಟದ ಶಬ್ದವು ಶ್ರೀನಗರದಿಂದ ದಕ್ಷಿಣಕ್ಕೆ ಹಲವಾರು ಕಿಲೋಮೀಟರ್ ದೂರದಲ್ಲಿ ಕೇಳಿಬಂದಿತ್ತು ಎಂದು ಹೇಳಲಾಗುತ್ತಿದೆ.

























