ದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ತನಿಖೆ ಭರದಿಂದ ಸಾಗಿದ್ದು, ಪ್ರಮುಖ ಬೆಳವಣಿಗೆಗಳು ಕಂಡುಬಂದಿವೆ.
ಸ್ಫೋಟಗೊಂಡ HR 26 CE 7674 ನೋಂದಣಿಯ i20 ಕಾರು ಮೊಹಮ್ಮದ್ ಸಲ್ಮಾನ್ ಎಂಬುವವರ ಹೆಸರಿನಲ್ಲಿ ಹರಿಯಾಣದಲ್ಲಿ ನೋಂದಣಿಯಾಗಿತ್ತು.
ಗುರುಗ್ರಾಮದ ಶಾಂತಿನಗರ ನಿವಾಸಿ ಸಲ್ಮಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕಾರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ದೆಹಲಿಯ ಓಕ್ಲಾ ನಿವಾಸಿ ದೇವೇಂದರ್ ಅವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ತನಿಖೆಯನ್ನು ಮುಂದುವರಿಸಿದ ಪೊಲೀಸರಿಗೆ, ದೇವೇಂದರ್ ಕೂಡ ಕಾರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ತಾರೀಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಬೆಳವಣಿಗೆಯು ಪ್ರಕರಣಕ್ಕೆ ಪುಲ್ವಾಮಾ ನಂಟನ್ನು ಸೂಚಿಸಿದ್ದು, ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ. ಉಗ್ರರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ದೆಹಲಿ ಪೊಲೀಸರ ತಂಡವೊಂದು ತಾರೀಕ್‌ನ ಜಾಡು ಹಿಡಿದು ಪುಲ್ವಾಮಾಗೆ ತೆರಳಿದೆ.
ಸದ್ಯಕ್ಕೆ ಸಲ್ಮಾನ್ ಮತ್ತು ದೇವೇಂದರ್ ಅವರನ್ನು ವಶಕ್ಕೆ ಪಡೆದು, ಸ್ಫೋಟದ ಕಾರಣ, ಉದ್ದೇಶ ಮತ್ತು ಪಿತೂರಿಯ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ. ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ಅಧಿಕಾರಿಗಳು ಸಹ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.
























