ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಭಯಾನಕ ಕಾರು ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದ್ದು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲೆಡೆ ಹೈಅಲರ್ಟ್ ಘೋಷಿಸಿದ್ದು, ಇತ್ತ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಡಿಜಿ&ಐಜಿಪಿ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಏರ್ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್ಪಿಗಳಿಗೆ ಡಿಜಿ&ಐಜಿಪಿ ಆದೇಶಿಸಿದ್ದಾರೆ.
ನಡೆದದ್ದೇನು?
ಸೋಮವಾರ ಸಂಜೆ 6 ಗಂಟೆ 50 ನಿಮಿಷದ ಸುಮಾರಿಗೆ ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಮಾರುತಿ ಇಕೋ ವ್ಯಾನ್ ಸ್ಫೋಟವಾಗಿದೆ. ಸ್ಫೋಟದ ತೀವ್ರತೆ ಅದೆಷ್ಟರ ಮಟ್ಟಿಗೆ ಇತ್ತೆಂದರೆ, ಸ್ಥಳದಲ್ಲಿ ಓಡಾಡುತ್ತಿದ್ದ ಹಲವರ ದೇಹಗಳು ಛಿದ್ರ ಛಿದ್ರವಾಗಿವೆ. ರಸ್ತೆಯಲ್ಲಿ, ಕಾರಿನ ಮೇಲೆ ಮೃತದೇಹಗಳು ಪೀಸ್ ಪೀಸ್ ಆಗಿ ರಕ್ತ ಸಿಕ್ತವಾಗಿ ಬಿದ್ದಿವೆ.
ಇನ್ನು ಬೆಂಕಿ ಅದೆಷ್ಟರ ಮಟ್ಟಿಗೆ ವ್ಯಾಪಿಸಿತು ಅಂದರೆ ನೋಡ ನೋಡುತ್ತಲೇ ಅಲ್ಲೇ ನಿಂತಿದ್ದ ಹಲವು ವಾಹನಗಳಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸ್ಫೋಟದಲ್ಲಿ ಒಟ್ಟು 9ಕ್ಕೂ ಹೆಚ್ಚು ವಾಹನಗಳೂ ಸಹ ಹೊತ್ತಿ ಉರಿದಿವೆ.
























