ಬೆಳ್ತಂಗಡಿ: ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ.
ನವೆಂಬರ್ 2 ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ರಾಹೀಂ ಖಲೀಲ್ ಯಾನೆ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್ (25) ಅವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದರು.
ಪಟ್ಟರಮೆ ಗ್ರಾಮದ ಪಟ್ಟೂರಿನ ಝೆಹಾರ ಸೇರಿದಂತೆ ಒಟ್ಟು ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣವನ್ನು ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11,(1)(ಡಿ) ಪ್ರಾಣಿ ಹಿಂಸೆ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು
ಮೂರು ದನಗಳನ್ನು ಆರೋಪಿ ಎ-2 ಉಳ್ಳಾಲ ತಾಲೂಕಿನ ಸಜಿಪನಾಡು ಗ್ರಾಮದ ತಂಚಿಬೆಟ್ಟು ನಿವಾಸಿ ಖಲೀಲ್ ಯಾನೆ ತೌಸಿಫ್ ಮನೆಯಲ್ಲಿ ವಧೆ ಮಾಡಲು ಸಂಚು ರೂಪಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.
ಈ ಮಾಹಿತಿಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು, ನವೆಂಬರ್ 4 ರಂದು ಇಬ್ರಾಹೀಂ ಖಲೀಲ್ ಯಾನೆ ತೌಸೀಫ್ ನ ಮನೆಯನ್ನು ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದಾರೆ.
ಈ ಅಕ್ರಮ ಸಾಗಾಟ ಮತ್ತು ವಧೆಯ ಜಾಲದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
























