ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದ ಜಾನುವಾರು ಸಾಗಾಟ ಶೂಟೌಟ್ (PUTTUR ShootOut) ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳಿಗೆ ಪೊಲೀಸರು ಸ್ಪಷ್ಟಿಕರಣ ನೀಡಿದ್ದಾರೆ. ಜಾನುವಾರುಗಳನ್ನು ವಾಹನದಿಂದ ಇಳಿಸುವ ಮತ್ತು ರಕ್ಷಿಸುವ ಕಾರ್ಯದಲ್ಲಿ ಸ್ಥಳೀಯರ ಸಹಕಾರ ಪಡೆದಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ಘಟನೆ ವಿವರ:
ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ವಶಪಡಿಸಿಕೊಂಡ 12 ಜಾನುವಾರುಗಳಲ್ಲಿ ಒಂದು ಮೃತಪಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಪರಿಸ್ಥಿತಿಯನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿ, ಉಳಿದ ಜಾನುವಾರುಗಳ ಇನ್ನಷ್ಟು ಸಾವು ತಪ್ಪಿಸಲು ಅವುಗಳನ್ನು ವಾಹನದಿಂದ ಇಳಿಸಲು ಅನುಮತಿ ಕೋರಿದ್ದರು. ಇದಕ್ಕೆ ಪೊಲೀಸರು ಸಮ್ಮತಿಸಿದ್ದರು.
ನಂತರ, ಕಟ್ಟಿದ್ದ ಹಗ್ಗಗಳನ್ನು ಕತ್ತರಿಸಲು ಕತ್ತಿಯ ಅಗತ್ಯವಿತ್ತು. ಜಾನುವಾರುಗಳನ್ನು ರಕ್ಷಿಸಲು ನೆರವಾಗುವ ಉದ್ದೇಶದಿಂದ ಘಟನಾ ಸ್ಥಳದ ಎದುರಿನ ಒಂದು ಮುಸ್ಲಿಂ ಕುಟುಂಬದ ಮನೆಯಿಂದ ಕತ್ತಿಯನ್ನು ತರಿಸಿಕೊಂಡು ಹಗ್ಗಗಳನ್ನು ಕತ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಹಾಯ ಪಡೆಯುವುದು ಸಾಮಾನ್ಯ:
ಪೊಲೀಸರು ಇಂತಹ ಸಂದರ್ಭಗಳಲ್ಲಿ ರೋಗಿಗಳನ್ನು ಸ್ಥಳಾಂತರಿಸುವುದು, ಶವಗಳನ್ನು ಸಾಗಿಸುವುದು. ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸುವುದು ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯರು ಮತ್ತು ಇತರರ ಸಹಾಯವನ್ನು ಪಡೆಯುವುದು ಸಾಮಾನ್ಯ. ಅದೇ ರೀತಿ ಈ ಪ್ರಕರಣದಲ್ಲೂ ಸ್ಥಳೀಯರ ಸಹಕಾರ ಪಡೆಯಲಾಗಿತ್ತು ಎಂದು ತಿಳಿಸಲಾಗಿದೆ.
ಯಾರು ಅನಧಿಕೃತ ಕೃತ್ಯ ಮಾಡುತ್ತಾರೋ ಅವರನ್ನು ಮಾತ್ರ ಅಪರಾಧಿಗಳೆಂದು ಪರಿಗಣಿಸಬೇಕು. ಇದುವರೆಗೆ ದಾಖಲಾದ ಪ್ರಕರಣಗಳ ವಿಶ್ಲೇಷಣೆಯಿಂದ ನೋಡಿದರೆ. ಜಾನುವಾರು ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳಲ್ಲಿ ವಿವಿಧ ಧರ್ಮದವರು ಭಾಗಿಯಾಗಿದ್ದಾರೆ ಎಂಬುದು ವಿಶ್ಲೇಷಣೆಯಿಂದ ಸ್ಪಷ್ಟವಾಗುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಯಾವುದೇ ಸಂಸ್ಥೆ ಅಥವಾ ಸಂಘಟನೆಯು ಆರೋಪಿಯು ಬೇರೆ ಧರ್ಮದವರಾದ್ದರಿಂದ ಮಾತ್ರ ವಿಷಯವನ್ನು ಮುನ್ನೆಲೆಗೆ ತರುವುದು ಅಥವಾ ತಮ್ಮ ಧರ್ಮದವರಾದ್ದರಿಂದ ಮುಚ್ಚಿಹಾಕಲು ಯತ್ನಿಸುವುದು ಸರಿಯಲ್ಲ. ಇಂತಹ ಸಂಸ್ಥೆಗಳ ಉದ್ದೇಶ ಮತ್ತು ಅಜೆಂಡಾಗಳನ್ನು ಜನರು ಪ್ರಶ್ನಿಸಬೇಕು ಮತ್ತು ಬೆಂಬಲ ನೀಡಬಾರದು ಎಂದು ವಿನಂತಿಸಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ:
ಈ ಸಂಬಂಧ ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.