ವಾಹನ ನಿಲುಗಡೆ ವಿಚಾರದಲ್ಲಿ ಶಿಕ್ಷಕರೊಬ್ಬರೊಂದಿಗೆ ವಾಗ್ವಾದ ನಡೆಸಿರುವ ಮೂವರು, ಅವರನ್ನು ಹತ್ಯೆಗೈದಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಪ್ರವೀಣ್ ಝಾ (48) ಎಂದು ಗುರುತಿಸಲಾಗಿದ್ದು, ಅವರು ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಟಿ.ಸರವಣನ್, ಗುರುವಾರ ರಾತ್ರಿ ಪಾರ್ಕಿಂಗ್ ವಿಚಾರದಲ್ಲಿ ಪ್ರವೀಣ್ ಮತ್ತು ಆದರ್ಶ್ ಸಿಂಗ್ ಎಂಬವರ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಆದರ್ಶ್ ಸಿಂಗ್ ಜೊತೆಗೆ ಸೇರಿಕೊಂಡ ಇನ್ನಿಬ್ಬರು, ಅವರ ಮೇಲೆ ಕಟ್ಟಿಗೆ ಮತ್ತು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಝಾರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು” ಎಂದು ತಿಳಿಸಿದ್ದಾರೆ.
ಮೃತ ಪ್ರವೀಣ್ ಝಾ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ