ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಕಿರಿಯ ಪುತ್ರ ಉಮರ್ ಅನ್ಸಾರಿ ಅವರನ್ನು ಘಾಜಿಪುರ ಪೊಲೀಸರು ಲಕ್ನೋದಿಂದ ಭಾನುವಾರ (ಆ.3) ಬಂಧಿಸಿದ್ದಾರೆ.
ಉಮರ್ ಅವರನ್ನು ಲಕ್ನೋದ ದಾರುಲ್ಕಾಫಾದಲ್ಲಿರುವ ಅವರ ಸಹೋದರ ಅಬ್ಬಾಸ್ ಅನ್ಸಾರಿ ಅವರ ನಿವಾಸದಿಂದ ಬಂಧಿಸಲಾಗಿದ್ದು ಬಳಿಕ ಪೊಲೀಸರ ತಂಡ ಅವರನ್ನು ಘಾಜಿಪುರಕ್ಕೆ ಕರೆದೊಯ್ದಿದೆ ಎನ್ನಲಾಗಿದೆ.
ನಕಲಿ ದಾಖಲೆಗಳನ್ನು ತಯಾರಿಸಿ ವಂಚನೆ ಎಸಗಿದ್ದಕ್ಕಾಗಿ ಘಾಜಿಪುರ ಜಿಲ್ಲೆಯ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಉಮರ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಲ್ಲಿ ನಕಲಿ ದಾಖಲೆಗಳನ್ನು ಹಾಜರುಪಡಿಸಿದ ಆರೋಪದ ಮೇಲೆ ಉಮರ್ ಅನ್ಸಾರಿ ಅವರನ್ನು ಭಾನುವಾರ ಬಂಧಿಸಲಾಗಿದೆ. ಈ ಪ್ರಕರಣವು ಅವರ ತಂದೆಯ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಬಿಡುಗಡೆ ಮಾಡಲು ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ:
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಉತ್ತರ ಪ್ರದೇಶ ಗ್ಯಾಂಗ್‌ಸ್ಟರ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಕ್ಕೆ ಪಡೆದುಕೊಂಡಿರುವ ತನ್ನ ಕುಟುಂಬದ ಆಸ್ತಿಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮತ್ತು ತನ್ನ ಹಕ್ಕನ್ನು ಸಾಬೀತುಪಡಿಸಲು ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪ ಉಮರ್ ಮೇಲಿದೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳಲ್ಲಿ ಉಮರ್ ತಾಯಿ ಅಫ್ಘಾನ್ ಅನ್ಸಾರಿ ಅವರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವಂಚನೆ ನಡೆಸಿರುವುದು ಬೆಳಕಿಗೆ ಬರುತ್ತಿದ್ದಂತೆ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಉಮರ್ ಅನ್ಸಾರಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Search